ಹಾಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೂ ಹಗರಣದ ಸುಳಿಯಲ್ಲಿ ಸಿಲುಕಿ ತ್ರಿಶಂಕು ಸ್ಥಿತಿ ಅನುಭವಿಸುತ್ತಿದ್ದರೆ, ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ತಮ್ಮ ಪುತ್ರರಿಗಾಗಿ ಮಾಡಿದ್ದ ಸಾಲ ತೀರಿಸಲಾಗದೆ ಅವರಿಗೆ ಸೇರಿದ ಸುಮಾರು 70 ಕೋಟಿ ರೂಪಾಯಿ ಬೆಲೆ ಬಾಳುವ ಎರಡು ಬೃಹತ್ ಬಂಗಲೆಗಳು ಹರಾಜಿಗೆ ಬಂದಿವೆ.
ಪುತ್ರ ಮಧು ಬಂಗಾರಪ್ಪನಿಗಾಗಿ ಆಕಾಶ್ ಆಡಿಯೋ ಆರಂಭಿಸಲು ಬಂಗಾರಪ್ಪ ತಾವು ಮುಖ್ಯಮಂತ್ರಿಯಾಗಿದ್ದ ವೇಳೆ 1993ರಲ್ಲಿ ಕೆಎಸ್ಐಐಡಿಸಿಯಿಂದ 1.14 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಸಾಲಕ್ಕೆ ಮಲ್ಲೇಶ್ವರಂನಲ್ಲಿರುವ ಲಾವಣ್ಯ ಟವರ್ಸ್ ಹಾಗೂ ಸದಾಶಿವನಗರದಲ್ಲಿರುವ ಶ್ರೀ ರೇಣುಕಾಂಬ ಕಟ್ಟಡವನ್ನು ಅಡಮಾನ ಇಟ್ಟಿದ್ದರು.
ಸಾಲದ ಮೂಲಧನ, ಬಡ್ಡಿ, ಚಕ್ರಬಡ್ಡಿ ಸೇರಿ ಇದುವರೆಗೆ 3.70 ಕೋಟಿ ರೂಪಾಯಿಗಳಾಗಿದೆ ಎಂದು ಕೆಎಸ್ಐಐಡಿಸಿ ತಿಳಿಸಿದೆ. ಆದರೆ ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿಸದ ಹಿನ್ನೆಲೆಯಲ್ಲಿ ಬಂಗಾರಪ್ಪ ಅವರಿಗೆ ನೋಟಿಸ್ ಮೇಲೆ ನೋಟಿಸ್ ನೀಡಿದ್ದ ಸಂಸ್ಥೆ ಅನಂತರ ಸಾಲದ ಹಿಂತಿರುಗಿಸುವಂತೆ ಸೂಚಿಸಲು ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
ವಿಚಾರಣೆ ನಡೆಸಿದ ನ್ಯಾಯಾಲಯ ಬಂಗಾರಪ್ಪ ಅವರು ಅಡಮಾನವಾಗಿ ಕೊಟ್ಟಿರುವ ಕಟ್ಟಡಗಳನ್ನು ಜಪ್ತಿ ಮಾಡಿಕೊಳ್ಳುವಂತೆ ಆದೇಶಿಸಿದೆ. ಈಗಾಗಲೇ ಬಂಗಾರಪ್ಪ ಅವರ ನಿವಾಸದ ಮೇಲೆ ಕಳೆದ ನ.15ರಂದು ಆದೇಶ ಪತ್ರ ಅಂಟಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.