ರಾಜ್ಯದಲ್ಲಿ ಇದೀಗ ಭೂ ಹಗರಣ, ನಿವೇಶನ ಹಗರಣಗಳ ಸರಮಾಲೆ ಜನಸಾಮಾನ್ಯರನ್ನು ಕಂಗೆಡಿಸಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಟುಂಬದ ಸದಸ್ಯರ ಮತ್ತೊಂದು ನಿವೇಶನ ಹಗರಣ ಬಯಲಿಗೆ ಬಂದಿದೆ.
ಮುಖ್ಯಮಂತ್ರಿ ಅಳಿಯ ಸೋಹನ್ ಕುಮಾರ್ ಅಕ್ರಮವಾಗಿ ಬಿಡಿಎ ನಿವೇಶನ ಪಡೆದುಕೊಂಡಿರುವುದು ಬಹಿರಗಂವಾಗಿದ್ದರಿಂದ, ಸಿಎಂ ಮತ್ತೊಮ್ಮೆ ಕುಟುಂಬ ಪ್ರೇಮದ ಸುಳಿಗೆ ಸಿಲುಕಿದ್ದಾರೆ.
ಬಿಡಿಎ ನಿಯಮಾವಳಿಗಳನ್ನು ಗಾಳಿಗೆ ತೂರಿ ಸೋಹನ್ ಕುಮಾರ್,ನಿವೇಶನ ಪಡೆದುಕೊಂಡಿದ್ದಾರೆ. ನಿವೇಶನ ಬದಲಾವಣೆ ವಿಚಾರದಲ್ಲಿ ನಿಯಮಗಳ ಉಲ್ಲಂಘನೆಯಾಗುತ್ತಿದ್ದರೂ ರಾಜಕೀಯ ಪ್ರಭಾವಕ್ಕೆ ಹೆದರಿ ಕಣ್ಣು ಮುಚ್ಚಿ ಎಲ್ಲಾ ಕಾನೂನುಬಾಹಿರ ಪ್ರಕ್ರಿಯೆಗಳಿಗೆ ಒಪ್ಪಿಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಮುಖ್ಯಮಂತ್ರಿಗಳ ಕುಟುಂಬದ ಸದಸ್ಯರು, ಸಂಬಂಧಿಕರು, ನಿಕಟವರ್ತಿಗಳು ಕಾನೂನುಬಾಹಿರವಾಗಿ ಭೂಹಗರಣ ಹಾಗೂ ನಿವೇಶನ ಹಗರಣಗಳಲ್ಲಿ ಭಾಗಿಯಾಗಿರುವ ಪ್ರಕರಣಗಳು ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿವೆ.
ಅನೇಕ ಭೂ ಹಗರಣಗಳಲ್ಲಿ ರಾಜಕೀಯ ಪ್ರಭಾವ ಬಳಸಿ, ಬೇನಾಮಿ ಹೆಸರುಗಳಲ್ಲಿ ರೈತರ ಭೂಮಿಯನ್ನು ಖರೀದಿಸಿ, ಕಾರ್ಪೋರೇಟ್ ಕಂಪೆನಿಗಳಿಗೆ ಮಾರಾಟ ಮಾಡುತ್ತಿರುವ ಅನೇಕ ಪ್ರಕರಣಗಳು ಬಹಿರಂಗವಾಗುತ್ತಿರುವುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೂ ದಾಹಕ್ಕೆ ವಿರೋಧ ಪಕ್ಷಗಳು ಕಟು ಟೀಕಾಪ್ರಹಾರವನ್ನು ನಡೆಸಿವೆ.
ಹಿನ್ನೆಲೆ:
ಬಿ.ಎಸ್.ಯಡಿಯೂರಪ್ಪ ಪ್ರತಿ ಪಕ್ಷದ ನಾಯಕರಾಗಿದ್ದ ಅವಧಿಯಲ್ಲಿ, ಮುಖ್ಯಮಂತ್ರಿ ಧರ್ಮಸಿಂಗ್ ಅವರಿಗೆ ಶಿಫಾರಸ್ಸು ಪತ್ರ ಕಳುಹಿಸಿಕೊಟ್ಟು, ಆರ್.ಪಿ.ಶಂಕರ್ ಅವರಿಗೆ ಬಿಡಿಎ ನಿವೇಶನ ನೀಡುವಂತೆ ಮನವಿ ಮಾಡಿದ್ದರು. ಮುಖ್ಯಮಂತ್ರಿ ಧರ್ಮಸಿಂಗ್ ನಿರ್ದೆಶನದಂತೆ ನಗರಾಭಿವೃದ್ಧಿ ಇಲಾಖೆ, ಬಿಡಿಎ ಆಯುಕ್ತರಿಗೆ ಪತ್ರ ಬರೆದು ಅರ್ಜಿದಾರರಿಗೆ ಮುಖ್ಯಮಂತ್ರಿ ಕೋಟಾದಡಿ ನಿವೇಶನ ನೀಡುವಂತೆ ಸೂಚಿಸಿದ್ದರು.
ಬಿಡಿಎ, ಹತ್ತು ವರ್ಷಗಳ ಅವಧಿಗೆ ಪರಭಾರೆ ಮಾಡುವಂತಿಲ್ಲ ಎನ್ನುವ ಷರತ್ತಿನೊಂದಿಗೆ ಎಚ್‌ಎಸ್‌ಆರ್ ಬಡಾವಣೆ ಮೂರನೇ ಹಂತದಲ್ಲಿ ನಿವೇಶನ ಮಂಜೂರು ಮಾಡಿತ್ತು.ಆದರೆ, ಶಂಕರ ಬಿಡಿಎ ನಿಯಮಗಳನ್ನು ಉಲ್ಲಂಘಿಸಿ, ಸಹೋದರಿ ವಿನೋದಾ ನಟರಾಜ್‌ಗೆ (ಸೋಹನ್ ಕುಮಾರ್ ತಾಯಿ) ದಾನಪತ್ರದ ಮೂಲಕ ಹಸ್ತಾಂತರಿಸಿದರು. ನಂತರ ವಿನೋದಾ ನಟರಾಜನ್ 2008ರ ಸೆಪ್ಟೆಂಬರ್ 15 ರಂದು ನಿವೇಶನವನ್ನು ತಮ್ಮ ಹೆಸರಿಗೆ ವರ್ಗಾಯಿಸುವಂತೆ ಬಿಡಿಎಗೆ ಅರ್ಜಿ ಸಲ್ಲಿಸಿದರು.
ಮುಖ್ಯಮಂತ್ರಿಗಳ ಸಂಬಂಧಿಕರು ಎನ್ನುವ ಕಾರಣಕ್ಕೆ ಹತ್ತು ವರ್ಷಗಳವರೆಗೆ ಪರಭಾರೆ ಮಾಡುವಂತಿಲ್ಲ ಎನ್ನುವ ಷರತ್ತುಗಳನ್ನು ಉಲ್ಲಂಘಿಸಿರುವುದನ್ನು ಪರಿಗಣೆಸದ ಬಿಡಿಎ, ವಿನೋದಾ ನಟರಾಜನ್ ಹೆಸರಿಗೆ ವರ್ಗಾಯಿಸಲು ಸಮ್ಮತಿ ಸೂಚಿಸಿತ್ತು.
2008ರ ಅಕ್ಟೋಬರ್ 24 ರಂದು, ಮುಂದಿನ ಹತ್ತು ವರ್ಷಗಳ ಅವಧಿಗೆ ನಿವೇಷನ ಹಸ್ತಾಂತರಿಸುವುದಿಲ್ಲ ಎನ್ನುವ ಷರತ್ತಿನೊಂದಿಗೆ ನಿವೇಶನವನ್ನು ವಿನೋದಾ ನಟರಾಜ್‌ಗೆ ಹೆಸರಿಗೆ ವರ್ಗಾಯಿಸಿತು.
ವಿನೋದಾ ನಟರಾಜ್ ಮತ್ತೆ ಬಿಡಿಎಗೆ ಅರ್ಜಿ ಸಲ್ಲಿಸಿ, ತಮ್ಮ ನಿವೇಶನವನ್ನು ಪುತ್ರ ಸೋಹನ್ ಕುಮಾರ್ (ಸಿಎಂ ಅಳಿಯ) ಹೆಸರಿಗೆ ವರ್ಗಾಯಿಸುವಂತೆ ಕೋರಿದರು. ಆದರಂತೆ, ರಾಜಕೀಯ ಪ್ರಭಾವಕ್ಕೆ ಹೆದರಿ ಬಿಡಿಎ ಅಧಿಕಾರಿಗಳು ಷರತ್ತು ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬದಲು, ಸೋಹನ್ ಕುಮಾರ್ ಹೆಸರಿಗೆ ನಿವೇಶನ ವರ್ಗಾಯಿಸಿತ್ತು.