ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಆಡಳಿತಾರೂಢ ಬಿಜೆಪಿ ಸರಕಾರದ ಮುಖ್ಯ ಸಚೇತಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಶೃಂಗೇರಿ ಕ್ಷೇತ್ರದ ಶಾಸಕ ಡಿ.ಎನ್.ಜೀವರಾಜ್ ವಾಪಸ್ ಪಡೆದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರ ಅನರ್ಹತೆಯ ಪ್ರಕರಣ ಸುಪ್ರೀಂಕೋರ್ಟ್ ಕಟಕಟೆಯಲ್ಲಿದ್ದು, ಸಚೇತಕರ ಕಚೇರಿ ಖಾಲಿ ಇರಬಾರದೆಂಬ ಮುಖ್ಯಮಂತ್ರಿ ಅವರ ಸಲಹೆ ಮೇರೆಗೆ ರಾಜೀನಾಮೆ ಹಿಂದಕ್ಕೆ ಪಡೆದಿದ್ದೇನೆ ಎಂದು ತಿಳಿಸಿದ್ದಾರೆ.
ಮುಂದಿನ ಸಚಿವ ಸಂಪುಟ ವಿಸ್ತರಣೆ ವೇಳೆಯಲ್ಲಿ ನನ್ನನ್ನು ಕೈಬಿಡುವುದಿಲ್ಲ ಎಂಬ ವಿಶ್ವಾಸ ಪಕ್ಷದ ವರಿಷ್ಠರು ನೀಡಿದ್ದಾರೆ. ಆ ನಿಟ್ಟಿನಲ್ಲಿ ಶಾಸಕರ ಅನರ್ಹತೆ ವಿಚಾರ ನ್ಯಾಯಾಲಯದ ಮುಂದಿರುವಾಗ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷ ವಹಿಸಿದ ಕೆಲಸ ನಿರ್ವಹಿಸುವುದು ನನ್ನ ಕರ್ತವ್ಯವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಕ್ಷದ ಐದು ಜನ ಶಾಸಕರಿದ್ದಾರೆ. ಅವರಲ್ಲಿ ನಾನು ಹಿರಿಯನಿದ್ದೇನೆ. ಎರಡು ಬಾರಿ ಸೋತಿದ್ದೇನೆ. ಎರಡು ಬಾರಿ ಗೆಲುವು ಸಾಧಿಸಿದ್ದೇನೆ. ಆದರೆ ನನ್ನ ಮತ್ತು ಸಿ.ಟಿ.ರವಿಯ ನಡುವೆ ವೈಮನಸ್ಸಿದೆ ಎಂಬುದು ಸರಿಯಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.