'ದೇವೇಗೌಡರ ಕುಟುಂಬ ಅಕ್ರಮವಾಗಿ ಕಬಳಿಸಿರುವ ಭೂಮಿಯನ್ನು ಒಂದು ವಾರದೊಳಗೆ ವಶಪಡಿಸಿಕೊಂಡು ಬಡವರಿಗೆ ಹಂಚುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. ಆದರೆ ಅಷ್ಟು ತಡ ಮಾಡುವ ಅಗತ್ಯವಿಲ್ಲ.ಕೂಡಲೇ ವಶಕ್ಕೆ ತೆಗೆದುಕೊಂಡು ಬಡವರಿಗೆ ಹಂಚಿ. ಈ ಬಗ್ಗೆ ನಾನು ಸಿಎಂಗೆ ಅಭಿನಂದನೆ ಸಲ್ಲಿಸುತ್ತೇನೆ' ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇರವಾಗಿಯೇ ಯಡಿಯೂರಪ್ಪ ಅವರಿಗೆ ಸವಾಲು ಹಾಕಿದ ಸನ್ನಿವೇಶ ಗುರುವಾರ ನಡೆಯಿತು.
ಸನ್ನಿವೇಶದ ವಿವರ:ನಗರದ ಯಲಹಂಕದ ಮುಗಲ್‌ಕೋಡದ ಸಿದ್ಧಶ್ರೀ ಧಾಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಒಂದೇ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭೂ ಹಗರಣದ ಆರೋಪ-ಪ್ರತ್ಯಾರೋಪದ ನಂತರ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಇಬ್ಬರೂ ಕೈಕುಲುಕಿದ್ದು ವಿಶೇಷವಾಗಿತ್ತು. ನಂತರ ಜೊತೆಯಾಗಿಯೇ ಜ್ಯೋತಿ ಬೆಳಗಿಸಿದ್ದರು.
ಜ್ಯೋತಿ ಬೆಳಗಿಸಿದ ನಂತರ ಮಾತನಾಡಿದ ಕುಮಾರಸ್ವಾಮಿ, ಮಾನ್ಯ ಮುಖ್ಯಮಂತ್ರಿಗಳ ಭೂ ಹಗರಣದ ದಾಖಲೆಗಳನ್ನು ಜನರ ಮುಂದಿಟ್ಟಿದ್ದೇನೆ. ಆದರೆ ಯಡಿಯೂರಪ್ಪ ಅವರು ದೇವೇಗೌಡರ ಕುಟುಂಬ ಅಕ್ರಮವಾಗಿ ಸಂಪಾದಿಸಿರುವ ಆಸ್ತಿಯನ್ನು ಒಂದು ವಾರದೊಳಗೆ ಸರಕಾರಕ್ಕೆ ಒಪ್ಪಿಸದಿದ್ದರೆ, ನಾನೇ ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿ ದಲಿತರಿಗೆ ವಾಪಸ್ ಕೊಡುವುದಾಗಿ ಹೇಳಿದ್ದರು. ದಯವಿಟ್ಟು ಒಂದು ವಾರ ಕಾಯಬೇಡಿ. ಕೂಡಲೇ ಆಸ್ತಿಯನ್ನು ವಶಪಡಿಸಿಕೊಂಡು ದಲಿತರಿಗೆ ಹಂಚಿ. ಆ ಬಗ್ಗೆ ನಾನು ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ನಾನು ತಪ್ಪು ಮಾಡಿದ್ದರೂ ತಪ್ಪೇ ಅಥವಾ ಬೇರೆಯವರು ಮಾಡಿದರೂ ಅದು ಕೂಡ ತಪ್ಪೇ ಎಂದ ಕುಮಾರಸ್ವಾಮಿ, ಭೂ ಹಗರಣಕ್ಕೆ ಸಂಬಂಧಿಸಿದಂತೆ ನಾನು ಯಾವುದೇ ತನಿಖೆಗೂ ಸಿದ್ದ ಎಂದು ಈ ಸಂದರ್ಭದಲ್ಲಿ ಹೇಳಿದರು. ಅಷ್ಟೇ ಅಲ್ಲ ತಮ್ಮ ಕುಟುಂಬದ ಭೂಮಿಯ ವಿವರ ದಾಖಲೆ ಮಾಧ್ಯಮಗಳ ಮುಂದೆ ಬಿಡುಗಡೆ ಮಾಡುವ ಕಾರ್ಯಕ್ರಮ ಇರುವುದರಿಂದ ಸಭೆಯಿಂದ ನಿರ್ಗಮಿಸುವುದಾಗಿ ಹೇಳಿದರು.
ಎಚ್‌ಡಿಕೆ ವೇದಿಕೆಯಲ್ಲಿದ್ದಿದ್ರೆ ಉತ್ತರ ನೀಡುತ್ತಿದ್ದೆ-ಸಿಎಂ: ಭೂ ಹಗರಣದ ಕುರಿತು ಕುಮಾರಸ್ವಾಮಿಯವರು ಸವಾಲು ಹಾಕಿ ಸಭೆಯಿಂದ ನಿರ್ಗಮಿಸಿದ ನಂತರ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ತೇಜೋವಧೆ ಮಾಡುತ್ತಿರುವ ವಿಷಯ ರಾಜ್ಯದ ಜನತೆಗೆ ತಿಳಿದಿದೆ. ಭೂ ಹಗರಣ ಕುರಿತಂತೆ ಕುಮಾರಸ್ವಾಮಿಯವರು ಮಾತನಾಡಿ ಸಭೆಯಿಂದ ತೆರಳಿದ್ದಾರೆ. ಅವರು ಸಭೆಯಲ್ಲೇ ಇದ್ದಿದ್ದರೆ, ನಾನು ಮನಬಿಚ್ಚಿ ಕೆಲವು ಮಾತುಗಳನ್ನ ಆಡಬೇಕು ಅಂತ ಇದ್ದೆ. ಹಾಗಾಗಿ ಈಗ ಅವರಿಲ್ಲದ ಸಂದರ್ಭದಲ್ಲಿ ರಾಜಕೀಯ ಮಾತನಾಡಲ್ಲ ಎಂದು ಕುಮಾರಸ್ವಾಮಿ ಸವಾಲಿಗೆ ಪ್ರತಿಕ್ರಿಯೆ ನೀಡಲ್ಲ ಎಂದರು.
ಯಾವುದೇ ಅರೋಪಕ್ಕೆ ಬೆದರುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಮಾತು ಕಡಿಮೆ ಮಾಡಿ ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ನಿಗಾ ವಹಿಸುವುದಾಗಿ ಹೇಳಿದರು.