ಆಡಳಿತಾರೂಢ ಬಿಜೆಪಿ ಮತ್ತು ಲೋಕಾಯುಕ್ತರ ನಡುವಿನ ಹಗ್ಗಜಗ್ಗಾಟದ ಸಂದರ್ಭದಲ್ಲಿಯೇ ಕೆಐಎಡಿಬಿ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಿರುದ್ಧ ಲೋಕಾಯುಕ್ತ ಗುರುವಾರ ಎಫ್ಐಆರ್ ದಾಖಲಿಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತೊಂದು ಸಂಕಷ್ಟಕ್ಕೆ ಈಡಾಗಿದ್ದಾರೆ.
ಇಟಾಸ್ಕಾ ಕಂಪನಿಗೆ ಕಾನೂನನ್ನು ಉಲ್ಲಂಘಿಸಿ ಕೆಐಎಡಿಬಿ ಭೂಮಿ ನೀಡಿರುವ ಆರೋಪ ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಪತ್ನಿ ಸೌಭಾಗ್ಯ ನಾಯ್ಡು ಹಾಗೂ ಬಿಬಿಎಂಪಿ ಸದಸ್ಯ ಜಗದೀಶ್ ಕಟ್ಟಾ ವಿರುದ್ಧ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಎಫ್ಐಆರ್ ದಾಖಲಿಸಿದ್ದಾರೆ.
ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಕಟ್ಟಾ ಪುತ್ರ ಜಗದೀಶ್ ಕಟ್ಟಾ ಸಾಕ್ಷಿದಾರರೊಬ್ಬರಿಗೆ ಲಂಚ ನೀಡುತ್ತಿದ್ದ ಸಂದರ್ಭದಲ್ಲಿಯೇ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಇದೀಗ ಕೆಐಎಡಿಬಿ ಹಗರಣದಲ್ಲಿಯೂ ಜಗದೀಶ್ ವಿರುದ್ಧ ಎರಡನೇ ಎಫ್ಐಆರ್ ದಾಖಲಾದಂತಾಗಿದೆ.
NRB
ಕೆಐಎಡಿಬಿ ಹಗರಣದಲ್ಲಿ ಕಟ್ಟಾ ಸೇರಿದಂತೆ ಇಟಾಸ್ಕಾ, ಯುನೈಟೆಡ್ ಟೆಲಿಕಾಂ, ಇಂದೂ ಡವೆಲಪರ್ಸ್ ಅಧಿಕಾರಿಗಳು ಸೇರಿದಂತೆ 11 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಅವರ ವಿರುದ್ಧ ಭಾರತೀಯ ದಂಡ ಸಂಹಿತೆ 419, 420, 465 ಹಾಗೂ 471 ಕಲಂ ಅನ್ವಯ ದೂರು ದಾಖಲಿಸಿರುವುದಾಗಿ ಲೋಕಾಯುಕ್ತ ಎಡಿಜಿಪಿ ರೂಪ್ ಕುಮಾರ್ ಗುಪ್ತಾ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
2007-08ರಲ್ಲಿ ಕಟ್ಟಾ ಸುಬ್ರಹ್ಮಣ್ಯ ಅವರು ಕೈಗಾರಿಕಾ ಸಚಿವರಾಗಿದ್ದ ಸಂದರ್ಭದಲ್ಲಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿರುವುದಕ್ಕೆ ಸಾಕಷ್ಟು ದಾಖಲೆಗಳಿಂದ ಸಾಬೀತಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಇಟಾಸ್ಕಾ ಕಂಪನಿ ನಾಯ್ಡು ಅವರು ಕೈಗಾರಿಕಾ ಸಚಿವರಾಗಿದ್ದಾಗ 325 ಎಕರೆ ಜಮೀನು ಬೇಕೆಂದು ಅರ್ಜಿ ಸಲ್ಲಿಸಿತ್ತು. ಆಗ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ದೇವನಹಳ್ಳಿ ಸಮೀಪ ಕೆಐಎಡಿಬಿ ವಿಶೇಷ ಆರ್ಥಿಕ ವಲಯ ಹೆಸರಿನಲ್ಲಿ ಭೂಮಿಯನ್ನು ವಶಕ್ಕೆ ತೆಗೆದುಕೊಂಡಿತ್ತು. ಆದರೆ ನಾಯ್ಡು ತನ್ನ ಪ್ರಭಾವ ಬಳಿಸಿ ಆ ಜಾಗವನ್ನು ಇಟಾಸ್ಕಾ ಕಂಪನಿಗೆ ನೀಡಿರುವುದಾಗಿ ಲೋಕಾಯುಕ್ತ ತನಿಖೆಯಿಂದ ತಿಳಿದುಬಂದಿದೆ.