ಲೋಕಾಯುಕ್ತ ಎಫ್‌ಐಆರ್: ಯಡ್ಡಿ, ಈಶ್ವರಪ್ಪ, ಕಟ್ಟಾ ನಿಗೂಢ ಸಭೆ
ಬೆಂಗಳೂರು, ಶುಕ್ರವಾರ, 3 ಡಿಸೆಂಬರ್ 2010( 10:58 IST )
NRB
ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಮತ್ತು ಸಚಿವ ಕಟ್ಟಾ ಸುಬ್ರಮಣ್ಯಂ ನಾಯ್ಡು, ನಿನ್ನೆ ರಾತ್ರಿ ಅಜ್ಞಾತ ಸ್ಥಳದಲ್ಲಿ ನಿಗೂಢ ಸಭೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೆಐಎಡಿಬಿ ಭೂ ಸ್ವಾಧೀನ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಕಟ್ಟಾ ಸುಬ್ರಮಣ್ಯಂ ನಾಯ್ಡು, ಅವರ ಪುತ್ರ ಬಿಬಿಎಂಪಿ ಸದಸ್ಯ ಕಟ್ಟಾ ಜಗದೀಶ್ ಸೇರಿದಂತೆ 10ಕ್ಕೂ ಹೆಚ್ಚು ಮಂದಿಯ ವಿರುದ್ಧ ಲೋಕಾಯುಕ್ತ ಪೊಲೀಸರು ನ್ಯಾಯಾಲಯದಲ್ಲಿ ಮೂಕದ್ದಮೆ ದಾಖಲಿಸಿದ್ದಾರೆ.
ಕಟ್ಟಾ ರಾಜೀನಾಮೆ ಪಡೆಯಬೇಕೆ ಅಥವಾ ಬೇಡವೆ ಮತ್ತು ವಿರೋಧ ಪಕ್ಷಗಳನ್ನು ಕಟ್ಟಿಹಾಕಲು ಯಾವ ತಂತ್ರಗಳನ್ನು ರೂಪಿಸಬೇಕು ಎನ್ನುವ ಕುರಿತಂತೆ, ನಿಗೂಢ ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಅವರ ಪುತ್ರನ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ನಾಗ್ಪುರ್‌ಗೆ ತೆರಳುತ್ತಿರುವುದರಿಂದ, ಸಚಿವ ಕಟ್ಟಾ ಪ್ರಕರಣ ಕುರಿತಂತೆ ರಾಷ್ಟ್ರೀಯ ಅಧ್ಯಕ್ಷ ಗಡ್ಕರಿಯವರೊಂದಿಗೆ ಚರ್ಚಿಸಲಾಗುವುದು. ಅಧ್ಯಕ್ಷರು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ದೇವನಹಳ್ಳಿ ಹತ್ತಿರವಿರುವ ಜಾಲ ಹೋಬಳಿಯ ಬಂಡಿಕೋಡಿಹಳ್ಳಿ ಗ್ರಾಮದಲ್ಲಿ ಇಟಾಸ್ಕಾ ಕಂಪೆನಿಗೆ 3.75 ಎಕರೆ ಭೂಮಿ ಮಾರಾಟದಲ್ಲಿ ಭಾರಿ ಅವ್ಯವಹಾರವಾಗಿದೆ ಎಂದು ಆರೋಪಿಸಿ, ಲೋಕಾಯುಕ್ತ ಪೊಲೀಸರು ನ್ಯಾಯಾಲಯದಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.