ಬೆಂಗಳೂರು: ಕೆಐಎಡಿಬಿ ಹಗರಣದ ಹಿನ್ನೆಲೆಯಲ್ಲಿ ಲೋಕಾಯುಕ್ತ ಐಟಿ-ಬಿಟಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಶುಕ್ರವಾರ ತಮ್ಮ ಸ್ಥಾನಕ್ಕೆ ಕೊನೆಗೂ ರಾಜೀನಾಮೆ ನೀಡಿದ್ದಾರೆ. ಕಟ್ಟಾ ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ಕಳುಹಿಸುವ ಮೂಲಕ ಭೂ ಹಗರಣದ ಪ್ರಕರಣದಲ್ಲಿ ಮೊದಲ ತಲೆದಂಡವಾದಂತಾಗಿದೆ.
ಕಟ್ಟಾ ನಾಪತ್ತೆ:ಭೂ ಹಗರಣದ ಆರೋಪದ ಮೇಲೆ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಾಪತ್ತೆಯಾಗಿದ್ದು, ಬಂಧನದ ಭೀತಿಯಲ್ಲಿರುವ ಕಟ್ಟಾ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
87 ಕೋಟಿ ಲಂಚ ಸ್ವೀಕಾರ: ಅಕ್ರಮವಾಗಿ 325 ಎಕರೆ ಭೂಮಿ ಮಂಜೂರು ಮಾಡಿದ್ದಕ್ಕೆ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತು ಪುತ್ರ ಕಟ್ಟಾ ಜಗದೀಶ್‌ಗೆ ಇಟಾಸ್ಕಾ ಕಂಪನಿಯ ಶ್ರೀನಿವಾಸ್ ಹಾಗೂ ಯುನೈಟೆಡ್ ಟೆಲಿಕಾಂ ಕಂಪನಿಯ ಬಸವಪೂರ್ಣಯ್ಯ ಅವರು 87 ಕೋಟಿ ರೂಪಾಯಿ ಲಂಚ ನೀಡಿದ್ದರು. ಈ ಆರೋಪ ಮೇಲ್ನೋಟಕ್ಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಕ್ರಿಮಿನಲ್ ಮೊಕದ್ದಮೆ ದಾಖಲಿಸಿತ್ತು.
2006ರಲ್ಲಿ ಕೈಗಾರಿಕಾ ಸಚಿವರಾಗಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಜಾಲ ಹೋಬಳಿ ಬಂಡಿಕೊಡಿಗೆಹಳ್ಳಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ವಿಶೇಷ ವಿತ್ತ ವಲಯ ಮತ್ತು ಐಟಿ ಪಾರ್ಕ್ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿದ್ದ ಇಟಾಸ್ಕಾ ಕಂಪನಿಗೆ ಭೂಮಿ ಮಂಜೂರು ಮಾಡುವ ಸಂದರ್ಭದಲ್ಲಿ ಅಧಿಕಾರ ದುರುಪಯೋಗ ಹಾಗೂ ಸ್ವಜನಪಕ್ಷಪಾತ, ಭ್ರಷ್ಟಾಚಾರ ಎಸಗಿರುವುದಾಗಿ ಲೋಕಾಯುಕ್ತ ದೂರಿದೆ.
ಅಷ್ಟೇ ಅಲ್ಲ ಆ ಗ್ರಾಮದ ಭೂ ಮಾಲೀಕರು ಮತ್ತು ರೈತರ ಸಹಿಗಳನ್ನು ಪೋರ್ಜರಿ ಮಾಡಿ ಹಣ ಪಡೆದಿರುವುದು ಕೂಡ ತನಿಖೆಯಲ್ಲಿ ಪತ್ತೆಯಾಗಿರುವುದಾಗಿ ಲೋಕಾಯುಕ್ತ ತಿಳಿಸಿದೆ. ಆ ಹಿನ್ನೆಲೆಯಲ್ಲಿ ಗುರುವಾರ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೇರಿದಂತೆ 11 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿತ್ತು.
ಸಿಎಂ ತರಾತುರಿ ಸಭೆ:ಕಟ್ಟಾ ವಿರುದ್ಧ ಲೋಕಾಯುಕ್ತ ಎಫ್ಐಆರ್ ದಾಖಲಿಸಿರುವ ಕುರಿತಂತೆ ಶುಕ್ರವಾರ ಬೆಳಿಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಚಿವರಾದ ಆರ್.ಅಶೋಕ್, ರಾಮದಾಸ್, ಮುಖ್ಯಕಾರ್ಯದರ್ಶಿ ರಂಗನಾಥ್, ಕಾನೂನು ಸಲಹೆಗಾರ ದಿವಾಕರ್ ಸೇರಿದಂತೆ ಹಲವು ಅಧಿಕಾರಿಗಳ ಜತೆ ಮುಂದಿನ ಕ್ರಮದ ಬಗ್ಗೆ ಮಾತುಕತೆ ನಡೆಸಿದ್ದರು.
ಆದರೆ ಈ ಹಿಂದೆ ಸಚಿವ ಸುಧಾಕರ್ ವಿರುದ್ಧವೂ ಸಿಬಿಐ ಎಫ್ಐಆರ್ ದಾಖಲಿಸಿತ್ತು. ಸಚಿವ ಜನಾರ್ದನ ರೆಡ್ಡಿ ವಿರುದ್ಧವೂ ಆರೋಪ, ಪ್ರಕರಣ ದಾಖಲಾಗಿದ್ದರೂ ಕೂಡ ಅವರ ರಾಜೀನಾಮೆ ಪಡೆದಿಲ್ಲವಾಗಿತ್ತು. ಹಾಗಾಗಿ ಕಟ್ಟಾ ಸುಬ್ರಹ್ಮಣ್ಯ ಅವರ ರಾಜೀನಾಮೆ ಪಡೆಯುವ ಸಾಧ್ಯತೆ ಕಡಿಮೆ ಎಂಬ ಮಾತು ಕೇಳಿಬಂದಿತ್ತು. ಆದರೆ ದಿಢೀರ್ ಎಂಬಂತೆ ಕಟ್ಟಾ ಸುಬ್ರಹ್ಮಣ್ಯ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.