ಗೌಡ್ರು ಚಿನ್ನದ ಸರ ಅಡವಿಟ್ಟು ಭೂಮಿ ಖರೀದಿಸಿದ್ರು: ರೇವಣ್ಣ
ಹಾಸನ, ಶುಕ್ರವಾರ, 3 ಡಿಸೆಂಬರ್ 2010( 13:43 IST )
1962ರಲ್ಲಿ ಎಕರೆಗೆ 100 ರೂ.ಗಳಂತೆ 11.22 ಎಕರೆ ಖರೀದಿಸಿದ್ದು, ದೇವೇಗೌಡರು ಅಂದು ತಾಯಿ ಚನ್ನಮ್ಮ ಅವರ ಚಿನ್ನದ ಸರ ಅಡವಿಟ್ಟು ಜಮೀನು ಮಾಡಿದ್ದಾರೆ. ಬಳಿಕ ನಾಲ್ಕು ಎಕರೆಯನ್ನು ದರ್ಖಾಸ್ತ್‌ನಲ್ಲಿ ಮಾಡಿಸಿಕೊಳ್ಳಲಾಗಿದೆ. ಅದರಲ್ಲಿ ನಾಲೆಗೆ 2.30 ಎಕರೆ ಭೂಮಿ ಹೋಗಿದ್ದರೂ ಅದಕ್ಕೆ ಈ ತನಕ ನಯಾ ಪೈಸೆ ಪರಿಹಾರ ಪಡೆದಿಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ತಿಳಿಸಿದ್ದಾರೆ.
ದೇವೇಗೌಡರು ಕಟ್ಟಪಟ್ಟು ಆಸ್ತಿ ಸಂಪಾದಿಸಿ ಪ್ರಾಮಾಣಿಕವಾಗಿ ಬದುಕಿದ್ದಾರೆ. ಕಾಮೇನಹಳ್ಳಿ ಬಳಿ ಇರುವ ಆಸ್ತಿಯನ್ನು ಗೌಡರು ಬಳಸುತ್ತಿಲ್ಲ. ಯಾರೋ ರೈತರು ಉಳುಮೆ ಮಾಡಿಕೊಳ್ಳುತ್ತಿದ್ದಾರೆ ಎಂದು ಈ ಸಂದರ್ಭದಲ್ಲಿ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ಆಸ್ತಿ ಪತ್ತೆ ಕಾರ್ಯಾಚರಣೆ ದೇವೇಗೌಡರ ಕುಟುಂಬದಿಂದಲೇ ಆರಂಭವಾಗಲಿ, ಅಭ್ಯಂತರವೇನಿಲ್ಲ. ಹಾಸನದಲ್ಲಿ ಸರ್ವೆ ಮಾಡಲು ಬರುವುದಾದರೆ ತಾವು ಖುದ್ದು ಸಿಎಂ ಅವರನ್ನು ಗೌರವಪೂರ್ವಕವಾಗಿ ಸ್ವಾಗತಿಸುತ್ತೇವೆ. ಬಳಿಕ ಶಿವಮೊಗ್ಗಕ್ಕೆ ಹೋಗಿ ಅಲ್ಲಿಯೂ ಅವರ ಕುಟುಂಬದ ಆಸ್ತಿ ಸರ್ವೆ ಮಾಡಿಸಲಿ ಎಂದು ತಿರುಗೇಟು ನೀಡಿದರು.
ಜಿಲ್ಲೆಯಲ್ಲಿ ಎಲ್ಲಿಯೂ ಅಕ್ರಮವಾಗಿ ಭೂಮಿ ಮಂಜೂರು ಮಾಡಿಸಿಕೊಂಡಿಲ್ಲ. ನಮ್ಮ ಕುಟುಂಬದ ಹೆಸರಿನಲ್ಲಿ 84 ಎಕರೆ ಭೂಮಿ ಇದೆ ಎನ್ನುವುದು ಸುಳ್ಳು. ನಮ್ಮ ಜಮೀನು ಪಕ್ಕದ್ದು, ದೊಡ್ಡಪ್ಪ, ಚಿಕ್ಕಪ್ಪನ ಆಸ್ತಿಯನ್ನೆಲ್ಲ ಸೇರಿಸಿ ನಮ್ಮ ಆಸ್ತಿ ಎಂದರೆ ಅದನ್ನು ಯಾರು ತಾನೇ ಒಪ್ಪುತ್ತಾರೆ ಎಂದು ಈ ಸಂದರ್ಭದಲ್ಲಿ ಪ್ರಶ್ನಿಸಿದರು.