ಹೂವಿನಹಡಗಲಿ, ಶುಕ್ರವಾರ, 3 ಡಿಸೆಂಬರ್ 2010( 14:41 IST )
ಉತ್ತಮ ಆಡಳಿತಕ್ಕೆ ದೇಶದಲ್ಲೇ ಹೆಸರಾಗಿದ್ದ ಕರ್ನಾಟಕ ಇದೀಗ ಭ್ರಷ್ಟಾಚಾರದಲ್ಲಿ ನಂ.1 ಸ್ಥಾನ ಪಡೆದಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟದಲ್ಲಿ ಮೂರ್ನಾಲ್ಕು ಮಂತ್ರಿಗಳನ್ನು ಹೊರತುಪಡಿಸಿ ಮುಖ್ಯಮಂತ್ರಿ ಸೇರಿ ಉಳಿದವರೆಲ್ಲರೂ ಭ್ರಷ್ಟರಾಗಿದ್ದಾರೆ. ಯಾವೊಬ್ಬ ಸಚಿವರೂ ವಿಧಾನಸೌಧಕ್ಕೆ ಬರದೇ ನಾಪತ್ತೆಯಾಗಿದ್ದಾರೆ ಎಂದು ದೂರಿದರು.
ಬಿಜೆಪಿ ಅಧಿಕಾರಕ್ಕೆ ಬಂದಾಗಿಂದ ಶಾಸಕರ ಖರೀದಿ, ಪಕ್ಷ ಬದಲಾವಣೆ, ಇತ್ತೀಚೆಗೆ ಸ್ಪೀಕರ್ ನೀಡಿದ ಆದೇಶದ ಗೊಂದಲದಿಂದ ರಾಜ್ಯ ತನ್ನ ವರ್ಚಸ್ಸು ಕಳೆದುಕೊಂಡಿದೆ. ಲೋಕಾಯುಕ್ತ ನ್ಯಾ.ಸಂತೋಷ ಹೆಗ್ಡೆ ನಿಷ್ಠುರವಾದಿ. ಭ್ರಷ್ಟಾಚಾರದ ವಿರುದ್ಧ ಕಠಿಣ ನಿಲುವು ತೆಗೆದುಕೊಂಡಿರುವ ಅವರ ನಿರ್ಧಾರಕ್ಕೆ ಸರಕಾರ ತಣ್ಣೀರೆರಚಿ, ಪತ್ರಿಕೆಗಳಲ್ಲಿ ಮೇಲ್ನೋಟಕ್ಕೆ ಸಹಾನುಭೂತಿ ತೋರಿಸುತ್ತಿದೆ ಎಂದು ಟೀಕಿಸಿದರು.
ರಾಜ್ಯಪಾಲರನ್ನು ನಡೆಸಿಕೊಳ್ಳುತ್ತಿರುವ ಸರಕಾರದ ನೀತಿ ಖಂಡಿಸಿದ ಅವರು, ರಾಜ್ಯಪಾಲರು ಸಂವಿಧಾನದ ಪರವಾಗಿದ್ದಾರೆ. ಸಂವಿಧಾನ ವಿರೋಧಿ ಕಾನೂನುಗಳನ್ನು ಜಾರಿ ಮಾಡಿದಾಗ ಅನಿವಾರ್ಯವಾಗಿ ಮಧ್ಯ ಪ್ರವೇಶಿಸಬೇಕಾಗುತ್ತದೆ. ಈಗಾಗಲೇ 3-4 ಸಂದರ್ಭಗಳಲ್ಲಿ ಕಡತಗಳಿಗೆ ಸಹಿ ಮಾಡದೆ ವಾಪಸು ಕಳುಹಿಸಿದ್ದಾರೆ. ನಂತರವೂ ಎಚ್ಚೆತ್ತುಕೊಳ್ಳದೆ ಸಂವಿಧಾನಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೊಡದಿರುವುದು ರಾಜ್ಯಪಾಲರ ಮನನೋಯಿಸಿದೆ. ರಾಜ್ಯಪಾಲರೊಬ್ಬರು ತಮ್ಮನ್ನು ಬೇರೆಡೆಗೆ ವರ್ಗ ಮಾಡುವಂತೆ ಪತ್ರ ಬರೆದಿರುವುದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು. ಇದು ರಾಜ್ಯಕ್ಕೆ ಕಪ್ಪು ಚುಕ್ಕೆ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಬಂಧುಗಳಿಗೆ ನೀಡಿರುವ ನಿವೇಶನಗಳನ್ನು ವಾಪಸು ಪಡೆದಿರುವುದಾಗಿ ಹೇಳುತ್ತಿರುವುದು ಘನ ಕಾರ್ಯವಲ್ಲ. ಸ್ವಜನ ಪಕ್ಷಪಾತ ಅನುಸರಿಸುವುದಿಲ್ಲ ಎಂದು ಪ್ರಮಾಣ ವಚನ ಸ್ವೀಕರಿಸಿ ಬರೀ ತಮ್ಮ ಕುಟುಂಬ ವರ್ಗದವರಿಗೆ ಸೌಲಭ್ಯ ನೀಡುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಅಸಮಾಧಾನ ವ್ಯಕ್ತಪಡಿಸಿದರು.