ಭಾಗ್ಯಲಕ್ಷ್ಮಿ ಯೋಜನೆ ಹೆಸರಿನಲ್ಲಿ ಸೀರೆ ಕೊಡುವುದು ಮಹಿಳೆಯರ ಮಾನ ಹರಾಜು ಹಾಕುವ ನೀಚ ಕಾರ್ಯಕ್ರಮ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕಿ ಮೋಟಮ್ಮ ಟೀಕಿಸಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೆಣ್ಣು ಮಕ್ಕಳಿಗೆ ಅವರ ಗಂಡಂದಿರು ಸೀರೆ ಕೊಡಿಸಬೇಕು. ಬೇರೆಯವರು ಸೀರೆ ಕೊಡುವುದು ಸಂಸ್ಕೃತಿಯಲ್ಲ. ಮಹಿಳೆಯರು ಸೀರೆ ಹಂಚುವ ಕಾರ್ಯಕ್ರಮಕ್ಕೆ ಹೋಗದಂತೆ ಅವರ ಗಂಡಂದಿರು ತಡೆಯಬೇಕೆಂದು ಹೇಳಿದರು.
ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಸ್ವಹಿತ ಚಿಂತನೆ, ಅರಾಜಕತೆಯಲ್ಲಿ ಬಿಜೆಪಿ ಸರಕಾರ ಮಿಂದೇಳುತ್ತಿದೆ. ಎರಡು ರೂ.ಗೆ ಅಕ್ಕಿ, ನಿರಂತರ ವಿದ್ಯುತ್, ಎರಡು ಲಕ್ಷ ಮನೆ ನೀಡುವ ಭರವಸೆ ಮರೆತ ಮುಖ್ಯಮಂತ್ರಿ ಮತ್ತು ಬಿಜೆಪಿ ಸ್ವಂತ ಅಭಿವೃದ್ಧಿಯಲ್ಲಿ ತೊಡಗಿ ಭೂಮಿಯನ್ನು ಸ್ವಾಹ ಮಾಡುತ್ತಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತದಾರರಲ್ಲಿ ಅರಿವು ಮೂಡಿಸಬೇಕೆಂದರು.
ರಾಜ್ಯದಲ್ಲಿ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿದ ಬಿಜೆಪಿಗೆ ಜನ ವೋಟು ಕೊಟ್ಟರು. ಆದರೆ, ಕಾಂಗ್ರೆಸ್ 60 ವರ್ಷದಲ್ಲಿ ಮಾಡದ ಭ್ರಷ್ಟಾಚಾರವನ್ನು ಬಿಜೆಪಿ ಎರಡೂವರೆ ವರ್ಷದಲ್ಲಿ ಮಾಡಿದೆ. ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮಗ ಭ್ರಷ್ಟಾಚಾರದಲ್ಲಿ ಸಿಕ್ಕಿ ಬಿದ್ದಾಗ, ಮಗ ಮಾಡಿದ ತಪ್ಪಿಗೆ ಅಪ್ಪನಿಗೆ ಯಾಕೆ ಶಿಕ್ಷೆ ಎಂದು ಯಡಿಯೂರಪ್ಪ ಹೇಳಿದ್ದರು. ನಂತರ ಯಡಿಯೂರಪ್ಪ ಅವರ ಮಕ್ಕಳು ಮಾಡಿದ ಹಗರಣ ಬೆಳಕಿಗೆ ಬಂದಾಗ ಅವರ ಮಾತಿನ ಮರ್ಮ ತಿಳಿಯಿತು ಎಂದು ವ್ಯಂಗ್ಯವಾಡಿದರು.