ತಾಲೂಕಿನಲ್ಲಿ 2008ರವರೆಗೆ ಎರಡು ಬಾರಿ ಶಾಸಕರಾಗಿದ್ದವರೇ 195.2 ಎಕರೆ ಸರಕಾರಿ ಜಮೀನು ಕಬಳಿಸಿದ್ದಾರೆ ಎಂದು ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಆರೋಪಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, 2000ನೇ ವರ್ಷದಿಂದಲೇ ನಕಲಿ ದಾಖಲೆ ಸೃಷ್ಟಿಸಿ ಸರಕಾರಿ ಜಮೀನು ಕಬಳಿಸಲಾಗಿದೆ. ಇದನ್ನು ತನಿಖೆಗೆ ಒಪ್ಪಿಸಿದ್ದ ನನ್ನ ಮೇಲೆಯೇ ಭೂಕಬಳಿಕೆ ಆರೋಪ ಮಾಡಿರುವ ಮಾಜಿ ಶಾಸಕ ಗೋವಿಂದಪ್ಪ ಮಾತಿನಲ್ಲಿ ಸತ್ಯಾಂಶವಿಲ್ಲ. ಅವರ ಅಧಿಕಾರಾವಧಿಯಲ್ಲೇ ತಾಲೂಕಿನಲ್ಲಿ ವ್ಯಾಪಕ ಅಕ್ರಮ ಗಣಿಗಾರಿಕೆ ನಡೆದಿದೆ. ಇದರಲ್ಲಿ ಅವರ ಸಂಬಂಧಿಗಳು, ಹಿಂಬಾಲಕರೂ ಸೇರಿದ್ದಾರೆ. ಇದಕ್ಕೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ದೂರುಗಳೇ ಸಾಕ್ಷಿ ಎಂದು ತಿಳಿಸಿದ್ದಾರೆ.
ಕ್ಷೇತ್ರದಲ್ಲಿ ಬಿಜೆಪಿಯ ರಾಜ್ಯ ನಾಯಕರು ನನಗೆ ಹಿನ್ನೆಡೆ ಉಂಟುಮಾಡಲು ಪ್ರವಾಸ ಕೈಗೊಂಡಿದ್ದಾರೆ. ಆದರೆ ತಾಲೂಕಿನ ಜನರ ಬೆಂಬಲ ತಮಗಿದೆ. ಬರುವ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ತಾಲೂಕಿನ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಬೆಂಬಲಿಗರನ್ನು ಪಕ್ಷೇತರರನ್ನಾಗಿ ಕಣಕ್ಕಿಳಿಸಲಾಗುವುದು ಎಂದು ಈ ಸಂದರ್ಭದಲ್ಲಿ ಹೇಳಿದರು.