ಕೆಐಎಡಿಬಿ ಭೂ ಹಗರಣದಲ್ಲಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತು ಅವರ ಪುತ್ರ ಜಗದೀಶ್ ಸೇರಿದಂತೆ ಹತ್ತು ಮಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿರುವುದು ಸಣ್ಣ ವಿಚಾರ, ಈ ಪ್ರಕರಣದಲ್ಲಿ ಇನ್ನೂ ಹಲವಾರು ಮಂದಿ ಸೇರಿಕೊಂಡಿದ್ದಾರೆ. ಶೀಘ್ರದಲ್ಲೇ 'ದೊಡ್ಡವರ' ಹೆಸರುಗಳೂ ಕೂಡ ಬಹಿರಂಗಗೊಳ್ಳಲಿದೆ ಎಂದು ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ತಿಳಿಸಿದ್ದಾರೆ.
ಎಫ್ಐಆರ್ ಹಾಕಿದ ಮಾತ್ರಕ್ಕೆ ಆರೋಪಿಯನ್ನು ಬಂಧಿಸಬೇಕೆಂಬುದಿಲ್ಲ. ಮೊಕದ್ದಮೆಯ ಪ್ರಾಮುಖ್ಯತೆ, ಪ್ರಕರಣದ ತೀವ್ರತೆ ಗಮನಿಸಿ ಬಂಧಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಮುಖ್ಯಮಂತ್ರಿ ಸೇರಿದಂತೆ ಯಾರ ವಿರುದ್ಧವಾದರೂ ಎಫ್ಐಆರ್ ದಾಖಲಿಸುವ ಹಾಗೂ ಬಂಧಿಸುವ ಅಧಿಕಾರ ಲೋಕಾಯುಕ್ತರಿಗೆ ಇದೆ ಎಂದರು.
ಭೂ ಹಗರಣಗಳ ಬಗ್ಗೆ ಲೋಕಾಯುಕ್ತ ತನಿಖೆ ಕೈಗೆತ್ತಿಕೊಳ್ಳುತ್ತಿದ್ದಂತೆ ರಾಜ್ಯ ಸರಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಈಗ ಯಾರು ತನಿಖೆ ನಡೆಸಬೇಕೆಂಬ ವಿಚಾರ ನ್ಯಾಯಾಲಯದಲ್ಲಿದೆ. ನ್ಯಾಯಾಲಯ ತೀರ್ಪು ನೀಡಿದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೆಗ್ಡೆ ಹೇಳಿದರು.