ಸಿಎಂ, ಈಶ್ವರಪ್ಪ ವಿರುದ್ಧ ಲೋಕಾಯುಕ್ತಕ್ಕೆ ದೂರು:ಕಾಂಗ್ರೆಸ್
ಬೆಂಗಳೂರು, ಶನಿವಾರ, 4 ಡಿಸೆಂಬರ್ 2010( 09:39 IST )
NRB
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಸೇರಿದಂತೆ 11 ಮಂದಿ ಸಚಿವರು, ಶಾಸಕರು ಭೂಹಗರಣದಲ್ಲಿ ಪಾಲ್ಗೊಂಡಿದ್ದಾರೆ ಎಂದು ಆರೋಪಿಸಿ, ಲೋಕಾಯುಕ್ತರಿಗೆ ಕಾಂಗ್ರೆಸ್ ದೂರು ಸಲ್ಲಿಸಿದೆ.
ಕಾಂಗ್ರೆಸ್ ವಕ್ತಾರ ವಿ.ಎಸ್.ಉಗ್ರಪ್ಪ, ಇತರ ನಾಯಕರಾದ ಬಿ.ಎಲ್. ಶಂಕರ ಮತ್ತು ಅಪ್ಪಾಜಿ ನಾಡಗೌಡ ಅವರು ಅಧಿಕೃತವಾಗಿ ಸಲ್ಲಿಸಿದ ದೂರಿನಲ್ಲಿ ದಾಖಲಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.
ಭೂಹಗರಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ಮುಖ್ಯಮಂತ್ರಿಯವರ ಪುತ್ರ ರಾಘವೇಂದ್ರ ಮತ್ತು ವಿಜಯೇಂದ್ರ, ಶೋಭಾ ಕರಂದ್ಲಾಜೆ ,ಆರ್.ಅಶೋಕ್, ಮುರುಗೇಶಿ ನಿರಾಣಿ ಸೇರಿದಂತೆ ಹಲವಾರು ಶಾಸಕರು ಕೂಡಾ ಹಗರಣಗಳ ರೂವಾರಿಗಳಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಅಕ್ರಮ ಗಣಿಗಾರಿಕೆಯ ಹಗರಣಗಳನ್ನು ಕೂಡಾ ಲೋಕಾಯುಕ್ತಕ್ಕೆ ಸಲ್ಲಿಸಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರಾದ ಜನಾರ್ಧನ ರೆಡ್ಡಿ, ಕರುಣಾಕರ ರೆಡ್ಡಿ ಮತ್ತು ಶ್ರೀರಾಮಲು ಅವರ ವಿರುದ್ಧ ತನಿಖೆ ನಡೆಸುವಂತೆ ಕಾಂಗ್ರೆಸ್ ಪಕ್ಷದ ನಾಯಕ ವಿ.ಎಸ್.ಉಗ್ರಪ್ಪ ಕೋರಿದ್ದಾರೆ.