ಭೂ ಹಗರಣ ಆರೋಪದ ಕುರಿತಂತೆ ನ್ಯಾಯಾಂಗ ತನಿಖೆಗೆ ಆದೇಶ ನೀಡಿರುವ ಹಿಂದೆ ಕೆಲವು ತಪ್ಪುಗಳಾಗಿದೆ ಎಂದು ಸ್ವತಃ ಬಿಜೆಪಿ ಸರಕಾರ ಒಪ್ಪಿಕೊಂಡಿದ್ದು, ಇದೀಗ ಲೋಕಾಯುಕ್ತರೇ ತಮಗೆ ಸೂಕ್ತ ಮಾರ್ಗ ತೋರಿಸಬೇಕೆಂದು ಕೋರಿ ನ್ಯಾ.ಸಂತೋಷ್ ಹೆಗ್ಡೆಯವರಿಗೆ ಪತ್ರ ಬರೆದಿರುವ ವಿಚಾರ ಬಹಿರಂಗವಾಗಿದೆ.
ನ್ಯಾಯಾಂಗ ತನಿಖೆಗೆ ಒಪ್ಪಿಸುವ ವಿಚಾರದಲ್ಲಿ ತಪ್ಪಾಗಿದೆ ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್, ಲೋಕಾಯುಕ್ತ ನ್ಯಾ.ಹೆಗ್ಡೆಯವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ. ಬಿಡಿಎ ಮತ್ತು ಕೆಐಎಡಿಬಿ ಭೂ ಹಗರಣ ಕುರಿತು ಸರಕಾರ ನ್ಯಾಯಾಂಗ ತನಿಖೆಗೆ ಆದೇಶ ನೀಡಿರುವ ಹಿಂದೆ ತಪ್ಪಾಗಿರುವುದು ಅಧಿಕೃತವಾಗಿ ಒಪ್ಪಿಕೊಂಡಿದೆ.
ಭೂ ಹಗರಣದ ತನಿಖೆಗೆ ಸಂಬಂಧಿಸಿದಂತೆ ಸರಕಾರ ಮತ್ತು ಲೋಕಾಯುಕ್ತ ನಡುವೆ ಹಗ್ಗಜಗ್ಗಾಟ ನಡೆದಿರುವ ನಡುವೆಯೇ, ಸರಕಾರ ಮುಖ್ಯ ಕಾರ್ಯದರ್ಶಿ ರಂಗನಾಥ್ ಇದೀಗ ಈ ಸಮಸ್ಯೆಯಿಂದ ಪಾರಾಗುವುದು ಹೇಗೆಂದು ತಾವೇ ತಮಗೆ ದಾರಿ ತೋರಿಸಬೇಕೆಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಬಿಡಿಎ, ಕೆಐಎಡಿಬಿ ಸೇರಿದಂತೆ ದೇವೇಗೌಡರ ಕಾಲದಿಂದ ಇಲ್ಲಿಯವರೆಗೆ ನಡೆದ ಎಲ್ಲಾ ಭೂ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶ ನೀಡಿದ್ದರು. ಇದರಿಂದ ತೀವ್ರ ಅಸಮಾಧಾನಗೊಂಡ ಲೋಕಾಯುಕ್ತ ನ್ಯಾ.ಹೆಗ್ಡೆ, ಭೂ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುವ ಮುನ್ನ ತನ್ನ ಬಳಿ ಒಂದು ಮಾತು ಕೇಳಿಲ್ಲ ಎಂದು ಕಿಡಿಕಾರಿದ್ದರು. ಬಿಡಿಎ, ಕೆಐಎಡಿಬಿ ಭೂ ಹಗರಣದ ಬಗ್ಗೆ ತನಿಖೆ ಕೈಗೆತ್ತಿಕೊಂಡು ಈಗಾಗಲೇ ನಾಲ್ಕು ತಿಂಗಳು ಕಳೆದಿದೆ. ಆ ನಿಟ್ಟಿನಲ್ಲಿ ಅದೇ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.
ಏತನ್ಮಧ್ಯೆ ಭೂ ಹಗರಣದ ಕುರಿತು ಯಾರು ತನಿಖೆ ನಡೆಸಬೇಕು ಎಂಬುದನ್ನು ಹೈಕೋರ್ಟ್ ಸೂಕ್ತ ನಿರ್ದೇಶನ ನೀಡಬೇಕೆಂದು ಕೋರಿ ಮಿಲಿಟರಿ ನಿವೃತ್ತ ಅಧಿಕಾರಿಯೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಹಾಗಾಗಿ ತನಿಖೆ ವಿಚಾರ ಕುರಿತಂತೆ ಹೈಕೋರ್ಟ್ ತೀರ್ಪು ನೀಡಿದ ನಂತರ ತಾನು ಮುಖ್ಯ ಕಾರ್ಯದರ್ಶಿ ಅವರ ಕೋರಿಕೆ ಬಗ್ಗೆ ಪ್ರತಿಕ್ರಿಯೆ ನೀಡುವುದಾಗಿ ನ್ಯಾ.ಸಂತೋಷ್ ಹೆಗ್ಡೆ ತಿಳಿಸಿದ್ದಾರೆ.