ವಿಶ್ವ ಸಂಸ್ಥೆಯ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ವ ನೀಡುವುದಾಗಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಘೋಷಿಸಿರುವುದು ಭಾರತಕ್ಕೆ ದೊಡ್ಡಲಾಭ ಎಂದು ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ತಿಳಿಸಿದ್ದಾರೆ.
ಖಾಸಗಿ ಭೇಟಿ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿದ್ದ ವೇಳೆ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬಾಮಾ ಭಾರತ ಭೇಟಿಯಿಂದ ಆದ ಲಾಭವೇನು? ಎಂಬ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.
ಕಳೆದ ವರ್ಷ ಭಾರತದ ಪ್ರತಿನಿಧಿಯಾಗಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಅಮೆರಿಕ ಆಹ್ವಾನಿಸಿದ್ದ ಹಿನ್ನೆಲೆಯಲ್ಲಿ ಭಾರತವು ಒಬಾಮಾ ಅವರನ್ನು ಆಹ್ವಾನಿಸಿತ್ತು. ಇದರಿಂದ ಒಬಾಮಾ ಭೇಟಿಯಿಂದ ಭಾರತಕ್ಕೇನು ಲಾಭ ಎನ್ನುವ ಪ್ರಶ್ನೆ ಉದ್ಬವಿಸೋಲ್ಲ ಎಂದರು.
ಭಾರತ ಮತ್ತು ಅಮೆರಿಕ ನಡುವೆ ರಾಜತಾಂತ್ರಿಕ, ಆರ್ಥಿಕ ಹಾಗೂ ಅಣುಒಪ್ಪಂದದ ಸಂಬಂಧವಿದೆ. ಅಮೆರಿಕ ಅಧ್ಯಕ್ಷ ಒಬಾಮಾ ಅವರು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸ್ಥಾನ ಕುರಿತು ಪ್ರತಿಪಾದಿಸಿದ ದೊಡ್ಡ ಬೆಂಬಲದ ಹೇಳಿಕೆಯಂತೆ ನಾವು ಮುಂದುವರಿಯುತ್ತಿದ್ದೇವೆ ಎಂದು ತಿಳಿಸಿದರು.
26/11ರಂದು ನಡೆದ ಮುಂಬಯಿ ಮೇಲಿನ ಉಗ್ರರ ದಾಳಿ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ವಿಕಿಲೀಕ್ಸ್ ಸಾಕ್ಷ್ಯಾಧಾರ ಸಹಿತ ಸಾಬೀತು ಪಡಿಸಿದೆ. ಇದು ಪಾಕ್ ಪಾಪಿ ಎಂಬುದನ್ನು ದೃಢಪಡಿಸಿದೆ ಎಂದು ಹೇಳಿದರು.