ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ಮೀಸಲಿನಲ್ಲಿ ಹಿಂದುಳಿದವರಿಗೆ ಅನ್ಯಾಯವಾಗಿರುವ ಕುರಿತು ಚರ್ಚಿಸಲು ಕೂಡಲೇ ವಿಧಾನಮಂಡಲ ಅಧಿವೇಶನ ಕರೆಯಬೇಕು ಎಂದು ರಾಜ್ಯ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಹಿಂದುಳಿದವರ ಮೀಸಲು ಪ್ರಮಾಣವನ್ನು ಶೇ.50ಕ್ಕೆ ಮಿತಿಗೊಳಿಸುವ ಸಂಬಂಧ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿ ಆದೇಶ ಬಂದರೂ ಅದನ್ನು ಮುಚ್ಚಿಟ್ಟು ಈಗ ಹಿಂದುಳಿದವರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿರುವ ಸರಕಾರದ ವಿರುದ್ಧ ಡಿಸೆಂಬರ್ 9 ಇಲ್ಲವೇ 10ರಂದು ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮೇ 11ರಂದೇ ಈ ಸಂಬಂಧದ ತೀರ್ಪು ಹೊರಬಿದ್ದಿದೆ. ಸರಕಾರದ ಪರವಾಗಿ ರಾಮ ಜೋಯಿಸ್ ಅವರು ವಾದ ಮಂಡಿಸಿದ್ದಾರೆ. ಇದಾದ ನಂತರ ಈ ತೀರ್ಪು ಬಂದಿದೆ ಎನ್ನುವುದು ನಮಗೆ ತಿಳಿದಿದ್ದು ಸರಕಾರ ಅಕ್ಟೋಬರ್ 4ರಂದು ಅಧಿಸೂಚನೆ ಹೊರಡಿಸಿದಾಗಲೇ. ಹಿಂದುಳಿದವರಿಗೆ ಅನ್ಯಾಯ ಮಾಡಲೆಂದೇ ಸರಕಾರ ಮೌನ ವಹಿಸಿತು ಎಂದು ಕಟುವಾಗಿ ಟೀಕಿಸಿದ ಅವರು, ಹಿಂದುಳಿದವರಿಗೆ ಶೇ.50ಕ್ಕೆ ಮೀಸಲು ಮಿತಿಗೊಳಿಸಿದರೆ 109 ಜಿಪಂ ಹಾಗೂ 482 ತಾಪಂ ಸ್ಥಾನಗಳಿಂದ ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರು ವಂಚಿತರಾಗಲಿದ್ದಾರೆ ಎಂದು ಹೇಳಿದರು.
ಇಷ್ಟೆಲ್ಲಾ ಮಾಡಿದ ಸರಕಾರ ಸುಗ್ರೀವಾಜ್ಞೆ ಜಾರಿಗೊಳಿಸಲು ರಾಜ್ಯಪಾಲರನ್ನು ಕೋರಿತು. ಸುಪ್ರೀಂಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ಇದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇರಲಿಲ್ಲ. ಇದರಿಂದ 2ನೇ ಬಾರಿಯೂ ಇದೇ ರೀತಿ ನಿರ್ಧಾರ ಕೈಗೊಂಡರು. ಈಗ ರಾಜ್ಯಪಾಲರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಹಿಂದುಳಿದವರಿಗೆ ಮೀಸಲು ಸಿಗಲೇಬೇಕು ಎನ್ನುವ ಪೂರ್ಣ ಮನಸಿದ್ದರೆ ಕೂಡಲೇ ಅಧಿವೇಶನ ಕರೆದು ಚರ್ಚಿಸಲಿ ಎಂದು ಒತ್ತಾಯಿಸಿದರು.