ಕಾಸರಗೋಡು ಸಾಂಸ್ಕೃತಿಕವಾಗಿ ಕರ್ನಾಟಕದಲ್ಲೇ ಇದೆ. ಹೀಗಾಗಿ ಗಡಿನಾಡ ಕನ್ನಡಿಗರಿಗೆ ಯಾವುದೇ ಸೌಲಭ್ಯ ಒದಗಿಸಲು ರಾಜ್ಯ ಸರಕಾರ ಸಿದ್ಧವಿದೆ ಎಂದು ಕರ್ನಾಟಕ ಪ್ರಾಥಮಿಕ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಎಡನೀರು ಮಠದಲ್ಲಿ ನಡೆದ ಶ್ರೀಈಶ್ವರಾನಂದ ಭಾರತೀ ಸ್ವಾಮೀಜಿ ಅವರ ಆರಾಧನಾ ಮಹೋತ್ಸವ ಅಂಗವಾಗಿ ಜರುಗಿದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಾಡಿನ ಅಭಿವೃದ್ಧಿಯಲ್ಲಿ ಕಾಸರಗೋಡು ಮೂಲದವರ ಕೊಡುಗೆ ಅಪಾರ. ಇಲ್ಲಿನವರು ಇಂದಿಗೂ ನಾವು ಕನ್ನಡಿಗರು ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತಾರೆ. ಭೌಗೋಳಿಕ, ಸಾಂಪ್ರದಾಯಿಕ ಹಾಗೂ ಸಾಂಸ್ಕೃತಿಕವಾಗಿ ಕಾಸರಗೋಡು ಕರ್ನಾಟಕದ ಒಂದು ಭಾಗವಾಗಿದೆ ಎಂದು ವಿವರಿಸಿದರು.
ಬಹಳ ಹಿಂದಿನಿಂದಲೇ ಗ್ರಾಮೀಣ ಜನತೆಗೆ ಶಿಕ್ಷಣವನ್ನು ಒದಗಿಸುವ ಮೂಲಕ ಎಡನೀರು ಮಠ ಸಮಾಜಕ್ಕೆ ಮಾದರಿಯಾಗಿದೆ. ಆರಂಭದಿಂದಲೂ ಇಲ್ಲಿನ ಗುರುಪರಂಪರೆಯ ಕಾರ್ಯವೈಖರಿ ಸಮಾಜಮುಖಿಯಾಗಿದೆ ಎಂದರು.