ಕೆಐಎಡಿಬಿ ಭೂ ಹಗರಣ ಆರೋಪದ ಹಿನ್ನೆಲೆಯಲ್ಲಿ, ಸಚಿವ ಸ್ಥಾನಕ್ಕೆ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ರಾಜೀನಾಮೆ ನೀಡಿರುವಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಕೂಡ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಒತ್ತಾಯಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಲೋಕಾಯುಕ್ತರು ಎಫ್ಐಆರ್ ದಾಖಲು ಮಾಡಿದ ಹಿನ್ನೆಲೆಯಲ್ಲಿ ಸಚಿವರು ರಾಜೀನಾಮೆ ನೀಡಿ ದೊಡ್ಡತನ ಮೆರೆದಿದ್ದಾರೆ ಎಂದರು.
ಲೋಕಾಯುಕ್ತರು ಸಿಎಂಗೂ ನೋಟಿಸ್ ಜಾರಿ ಮಾಡಿರುವುದರಿಂದ ಅವರು ರಾಜೀನಾಮೆ ನೀಡಲಿ ಎಂದ ಅವರು, ಭೂ ಹಗರಣದ ಸಂಬಂಧ ಲೋಕಾಯುಕ್ತರು 11 ಜನರ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ. 12ನೇ ಆರೋಪಿಯನ್ನಾಗಿ ಸಿಎಂ ಯಡಿಯೂರಪ್ಪ ಅವರ ಹೆಸರು ಸೇರಿಸಬೇಕು ಎಂದರು.
ಮೊದಲ ಬಾರಿಗೆ ಮೌನ ಮುರಿದು ಅಡ್ವಾಣಿ ಮಾತನಾಡಿರುವುದನ್ನು ಸಿಎಂ ಅರ್ಥ ಮಾಡಿಕೊಳ್ಳಲಿ. ನ್ಯಾ.ಪದ್ಮರಾಜ್ ತನಿಖಾ ಆಯೋಗಕ್ಕೆ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ವ್ಯಕ್ತಿ ಪೇಜಾವರ ಮಠಕ್ಕೆ ಹತ್ತಿರದವರು. ಇದರಿಂದ ಯಾವ ರೀತಿ ನ್ಯಾಯ ಸಿಗಬಹುದು ಹೇಳಿ ಎಂದು ಪ್ರಶ್ನಿಸಿದರು.