ಭೂ ಹಗರಣ ಸಂಬಂಧ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ತಲೆದಂಡವಾದ ಬೆನ್ನಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಮತ್ತೆ ಬೇಡಿಕೆ ಮುಂದಿಟ್ಟಿದೆ.
ಸ್ವತಃ ಯಡಿಯೂರಪ್ಪನವರೇ ಭೂ ಹಗರಣದಲ್ಲಿ ಪಾಲ್ಗೊಂಡಿದ್ದಾರೆ ಎಂಬ ಗಂಭೀರ ಆರೋಪಗಳಿರುವಾಗ, ತನ್ನ ಸಂಪುಟದ ಸಚಿವರೊಬ್ಬರು ರಾಜೀನಾಮೆ ನೀಡಿದ ಮಾತ್ರಕ್ಕೆ ಪಾಪ ತೊಳೆದು ಹೋಗದು; ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಯವರೂ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಒತ್ತಾಯಿಸಿದ್ದಾರೆ.
ಭೂ ಹಗರಣದಲ್ಲಿ ಲೋಕಾಯುಕ್ತರು ಕಟ್ಟಾ ವಿರುದ್ಧ ಎಫ್ಐಆರ್ ದಾಖಲಿಸಿದ ನಂತರ ರಾಜೀನಾಮೆ ನೀಡಿದ್ದರು. ಆ ಮೂಲಕ ಯಡಿಯೂರಪ್ಪನವರು ತಾನು ಪಾರಾಗಬಹುದು ಎಂಬ ನಿಟ್ಟಿನಲ್ಲಿ ಈ ಕ್ರಮಕ್ಕೆ ಮುಂದಾಗಿರಬಹುದು. ಆದರೆ ಅದು ಸಾಧ್ಯವಿಲ್ಲ ಎನ್ನುವುದು ಯಡಿಯೂರಪ್ಪ ತಿಳಿದುಕೊಳ್ಳಬೇಕು. ಅವರು ರಾಜೀನಾಮೆ ನೀಡಲೇಬೇಕು ಎಂದರು.
ಬಿಜೆಪಿಯ ಒಬ್ಬಿಬ್ಬರು ಹಗರಣದಲ್ಲಿ ಪಾಲ್ಗೊಂಡಿರುವುದಲ್ಲ ಎಂದ ಪರಮೇಶ್ವರ್, ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ 11 ಸಚಿವರು ಭೂ ಹಗರಣ ನಡೆಸಿದ್ದಾರೆ; ಈ ಬಗ್ಗೆ ಕಾಂಗ್ರೆಸ್ ಬಳಿ ಸಾಕಷ್ಟು ಪೂರಕ ದಾಖಲೆಗಳಿವೆ. ಈ ಬಗ್ಗೆ ಲೋಕಾಯುಕ್ತರಿಗೂ ದೂರು ನೀಡಲಾಗಿದೆ. ತನಿಖೆಯ ವೇಳೆ ಸತ್ಯಾಂಶ ಹೊರ ಬಿದ್ದರೆ ಖಂಡಿತಾ ಅವರಿಗೆ ಶಿಕ್ಷೆಯಾಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.
ಮಾಜಿ ಸಚಿವ ಕಟ್ಟಾ ಅವರ ಭೂ ಹಗರಣವನ್ನು ಬಹಿರಂಗಪಡಿಸಿದ್ದು ಜೆಡಿಎಸ್ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳುತ್ತಿರುವ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, ಸ್ಪಷ್ಟವಾಗಿ ಉತ್ತರಿಸಲು ಅವರು ನಿರಾಕರಿಸಿದರು.
ಇದನ್ನೆಲ್ಲ ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿಲ್ಲ. ಆ ಪಕ್ಷದವರು ಬೇಕೆಂದಾಗ ಬರುತ್ತಾರೆ. ಬೇಡವೆಂದಾಗ ಕೈ ಕೊಡುತ್ತಾರೆ ಎಂದು ಪರೋಕ್ಷವಾಗಿ ಜೆಡಿಎಸ್ ಹುಟ್ಟುಗುಣವನ್ನು ಲೇವಡಿ ಮಾಡಿದರು.