ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಜೈಲಿಗೆ ಹೋಗುವ ಮೊದಲ ಸಿಎಂ ಯಡಿಯೂರಪ್ಪ: ಎಚ್‌ಡಿಕೆ (BS Yeddyurappa | Karnataka | HD Kumaraswamy | JDS)
Bookmark and Share Feedback Print
 
ರಾಜ್ಯ ಸಚಿವ ಸಂಪುಟವು ಆಲಿಬಾಬಾ ಮತ್ತು ನಲ್ವತ್ತು ಮಂದಿ ಕಳ್ಳರ ಕೂಡ ಎಂದು ಈ ಹಿಂದೆಯೇ ಹೇಳಿದ್ದೆ. ಅದರಂತೆ ಜೈಲಿಗೆ ಹೋಗುವ ಮೊದಲ ಮುಖ್ಯಮಂತ್ರಿ ಎಂಬ ಕೀರ್ತಿ ಬಿ.ಎಸ್. ಯಡಿಯೂರಪ್ಪನವರದ್ದಾಗಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡುತ್ತಿದ್ದ ಅವರು, ಭ್ರಷ್ಟತೆ, ಸ್ವಜನಪಕ್ಷಪಾತ, ಭೂ ಹಗರಣಗಳಲ್ಲಿ ಸಿಲುಕಿರುವ ಮುಖ್ಯಮಂತ್ರಿ ಶೀಘ್ರದಲ್ಲೇ ಜೈಲಿಗೆ ಹೋಗಲಿದ್ದಾರೆ. ಆ ದಿನಗಳು ದೂರವಿಲ್ಲ. ಅವರು ತಮ್ಮ ಮಕ್ಕಳ ಅಭಿವೃದ್ಧಿಯನ್ನೇ ರಾಜ್ಯದ ಪ್ರಗತಿ ಎಂದು ಭಾವಿಸಿದಂತಿದೆ. ಅಕ್ರಮಗಳಿಂದಾಗಿ ಜೈಲು ಸೇರಿದ ಮೊದಲ ಮುಖ್ಯಮಂತ್ರಿ ಎಂಬ ಇತಿಹಾಸವನ್ನು ಅವರು ಸೃಷ್ಟಿಸಲಿದ್ದಾರೆ ಎಂದು ಭವಿಷ್ಯ ನುಡಿದರು.

ಸಚಿವ ಸಂಪುಟದಲ್ಲಿ ಇರುವವರಲ್ಲಿ ಕೆಲವೇ ಕೆಲವರು ಮಾತ್ರ ಸಾಚಾಗಳು. ಬಹುತೇಕ ಮಂದಿ ಕಳ್ಳರೇ ತುಂಬಿದ್ದಾರೆ. ಅವರಲ್ಲಿ ಪ್ರಾಮಾಣಿಕರನ್ನು ಹುಡುಕಬೇಕಾದ ಅವಸ್ಥೆ ಎದುರಾಗಿದೆ. ರಾಜ್ಯದ ಜನತೆ ಸಂಕಷ್ಟದಲ್ಲಿದ್ದರೆ ಮುಖ್ಯಮಂತ್ರಿ ಕೇರಳ, ತಮಿಳುನಾಡುಗಳ ದೇವಸ್ಥಾನಗಳಿಗೆ ಎಡತಾಕುತ್ತಿದ್ದಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಹಗರಣಕ್ಕೆ ಸಂಬಂಧಪಟ್ಟಂತೆ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಮುಂದಿನ ಸರದಿ ಮುಖ್ಯಮಂತ್ರಿ ಯಡಿಯೂರಪ್ಪನವರದ್ದು. ಜೈಲಿಗೆ ಹೋಗುವ ಮೊದಲಾದರೂ ರಾಜೀನಾಮೆ ನೀಡಲಿ. ರಾಜ್ಯಕ್ಕೆ ಅಪಖ್ಯಾತಿ ತರುವುದು ಬೇಡ ಎಂದೂ ಅವರು ಸಲಹೆ ನೀಡಿದರು.

ಕಟ್ಟಾ ರಾಜೀನಾಮೆಯಿಂದ ರಾಜ್ಯದ ಅಕ್ರಮಗಳಲ್ಲಿನ ನೈಜ ಚಿತ್ರಣ ಕಾಣತೊಡಗಿದೆ. ಮುಂದೆ ಕಾದು ನೋಡಿ. ಇನ್ನೂ ಸ್ಪಷ್ಟವಾದ, ನಿಖರವಾದ ಅಂಶಗಳು ಬಯಲಿಗೆ ಬರಲಿವೆ ಎಂದು ಏನನ್ನೂ ಹೇಳದೆ ಆಸಕ್ತಿ ಹುಟ್ಟಿಸಿದರು.

ತಮ್ಮ ಕುಟುಂಬದ ಅಕ್ರಮ ಆಸ್ತಿ ತನಿಖೆಗೆ ಯಡಿಯೂರಪ್ಪನವರು ಅಧಿಕಾರಿಗಳನ್ನು ಹಾಸನಕ್ಕೆ ಕಳುಹಿಸಿರುವುದು ಒಳ್ಳೆಯ ಬೆಳವಣಿಗೆ. ಆದಷ್ಟು ಬೇಗ ಗೌಡರು ಎಷ್ಟು ಅಕ್ರಮ ಆಸ್ತಿ ಮಾಡಿದ್ದಾರೆ ಎಂಬ ಸತ್ಯವನ್ನು ಜನತೆಗೆ ತಿಳಿಸಲಿ ಎಂದು ಕುಮಾರಸ್ವಾಮಿ ಮುಖ್ಯಮಂತ್ರಿಯವರ ಕ್ರಮವನ್ನು ಅಣಕ ಮಾಡಿದರು.
ಸಂಬಂಧಿತ ಮಾಹಿತಿ ಹುಡುಕಿ