ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಿಎಂ ತಾನು ಮಾಡಿದ್ದೇ ಕಾನೂನು ಅಂದ್ಕೊಂಡಿದ್ದಾರೆ: ಕುಮ್ಮಿ (HD Kumaraswamy | BS Yeddyurappa | Lokayutka | KS Eshwarappa)
Bookmark and Share Feedback Print
 
ಜೈಲಿಗೆ ಹೋಗುವ ಮೊದಲ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಂದು ವಾಗ್ದಾಳಿ ನಡೆಸಿ ಆರುವ ಮೊದಲೇ ಮತ್ತೊಂದು ಸುತ್ತಿನ ಪ್ರಹಾರ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿಯವರಿಂದ ಬಂದಿದೆ. ಈ ರಾಜ್ಯದ ಮುಖ್ಯಮಂತ್ರಿಗೆ ಕಾನೂನಿನ ಮೇಲೆ ಒಂಚೂರೂ ಗೌರವವಿಲ್ಲ, ತಾನು ಮಾಡಿದ್ದೇ ಕಾನೂನು ಎಂದುಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.

ಪಿಯುಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಮುಖ್ಯಮಂತ್ರಿಯವರ ಆಪ್ತರೊಬ್ಬರು ತಹಶೀಲ್ದಾರ್ ಹುದ್ದೆಗೆ ಭಡ್ತಿ ಪಡೆದಿರುವ ಅಕ್ರಮವನ್ನು ಉದಾಹರಿಸಿದ ಕುಮಾರಸ್ವಾಮಿ, ಈ ಮುಖ್ಯಮಂತ್ರಿಗೆ ತಾನು ಮಾಡಿದ್ದೇ ಕಾನೂನು ಎಂಬಂತಾಗಿದೆ. ಕಾನೂನಿನ ಕುರಿತು ಎಳ್ಳಷ್ಟೂ ಗೌರವವಿಲ್ಲ. ಕನಿಷ್ಠ ಇದೀಗ ರಾಜ್ಯ ಬಿಜೆಪಿಗೆ ವಿಶೇಷಾಧಿಕಾರಿಯಾಗಿ ನೇಮಕಗೊಂಡಿರುವ ಅರುಣ್ ಜೇಟ್ಲಿಯವರಾದರೂ ಬುದ್ಧಿ ಹೇಳಲಿ ಎಂದರು.

ಅದೇ ಹೊತ್ತಿಗೆ ಲೋಕಾಯುಕ್ತರ ಕಾರ್ಯವೈಖರಿ ಬಗ್ಗೆ ಬಿಜೆಪಿ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಟೀಕಿಸಿರುವುದನ್ನು ಆಕ್ಷೇಪಿಸಿರುವ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕರಿಗೆ ಏನಾಗಿದೆ ಎಂಬುದೇ ಗೊತ್ತಾಗುತ್ತಿಲ್ಲ ಎಂದಿದ್ದಾರೆ.

ಕುಮಾರಸ್ವಾಮಿ ಬೆಂಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.

ಗೌಡರ ಕುಟುಂಬ ಅಕ್ರಮವಾಗಿ ಭಾರೀ ಆಸ್ತಿ ಮಾಡಿಕೊಂಡಿದೆ ಎಂಬ ಆರೋಪಗಳ ಕುರಿತು ಸರಕಾರ ಪರಿಶೀಲನೆ ನಡೆಸುತ್ತಿರುವ ಕುರಿತು ಕೂಡ ಜೆಡಿಎಸ್ ಮುಖಂಡ ಇದೇ ಸಂದರ್ಭದಲ್ಲಿ ಲೇವಡಿ ಮಾಡಿದ್ದಾರೆ.

ಈ ಹಿಂದೆಯೇ ಇದರಲ್ಲಿ ಯಾವುದೇ ಅಕ್ರಮವಾಗಿಲ್ಲ ಎಂಬುದು ಸಾಬೀತಾಗಿತ್ತು. ಇದರ ತನಿಖಾ ವರದಿಯೂ ಹೊರಗೆ ಬಂದಿತ್ತು. ಈ ಸಂಬಂಧ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಕೂಡ ನ್ಯಾಯಾಲಯಗಳಲ್ಲಿ ವಜಾಗೊಂಡಿದ್ದವು. ಆದರೂ ಈಗ ಸರಕಾರವು ಗೌಡರ ಆಸ್ತಿ ವಿವರವನ್ನು ತನಿಖೆ ನಡೆಸುತ್ತಿದೆ. ಸರಕಾರದ ಈ ಕ್ರಮ ನ್ಯಾಯಾಂಗ ನಿಂದನೆಯಾಗುತ್ತದೆ. ಆದರೂ ನಾವು ಸರಕಾರದ ವಿರುದ್ಧ ಕೇಸು ಹಾಕುವ ಗೋಜಿಗೆ ಹೋಗುವುದಿಲ್ಲ. ಅವರೇನು ಮಾಡುತ್ತಾರೋ ಮಾಡಲಿ ಎಂದು ಸವಾಲು ಹಾಕಿದರು.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬವು ಹಾಸನದಲ್ಲಿ ಅಕ್ರಮವಾಗಿ 82 ಎಕರೆ ಜಮೀನನ್ನು ಅತಿಕ್ರಮಣ ಮಾಡಿಕೊಂಡಿದ್ದು, ಅದನ್ನು ಸರಕಾರ ವಶಪಡಿಸಿಕೊಳ್ಳಲಿದೆ. ನಂತರ ಅದನ್ನು ಬಡವರಿಗೆ ಹಂಚಲಾಗುವುದು ಎಂದು ಮುಖ್ಯಮಂತ್ರಿ ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರು. ಅದೇ ನಿಟ್ಟಿನಲ್ಲಿ ಪ್ರಸಕ್ತ ಸರಕಾರ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ