ಕಳೆದ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರ, ಕಾಂಗ್ರೆಸ್ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಎಂ. ರಾಜಶೇಖರ ಮೂರ್ತಿಯವರು ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ರಾಜ್ಯಸಭಾ ಸದಸ್ಯರಾಗಿರುವ ರಾಜಶೇಖರ ಮೂರ್ತಿಯವರನ್ನು (89) ದೆಹಲಿಯ ರಾಮಮನೋಹರ ಲೋಹಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಅವರು ಭಾನುವಾರ ರಾತ್ರಿ 11.30ರ ಹೊತ್ತಿಗೆ ಹೃದಯಾಘಾತಕ್ಕೊಳಗಾಗಿ ಇಹಲೋಕ ತ್ಯಜಿಸಿದ್ದಾರೆ.
PR
ಪಾರ್ಥೀವ ಶರೀರವನ್ನು ಇಂದು ಬೆಂಗಳೂರಿಗೆ ತರಲಾಗುತ್ತದೆ. ನಾಳೆ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಮೂರ್ತಿಯವರ ಅಳಿಯ ಚಿದಾನಂದ ತಿಳಿಸಿದ್ದಾರೆ.
ಮೂರ್ತಿಯವರು ನಡೆದು ಬಂದ ಹಾದಿ... 1922ರ ಮೇ 10ರಂದು ಮೈಸೂರು ಜಿಲ್ಲೆಯ ಮಾಲಂಗಿಯಲ್ಲಿ ಜನಿಸಿದ್ದ ರಾಜಶೇಖರ ಮೂರ್ತಿಯವರು ಸ್ವಾತಂತ್ರ್ಯ ಹೋರಾಟವನ್ನು ಬಲು ಹತ್ತಿರದಿಂದ ಕಂಡವರು. ಸ್ವತಃ ಹೋರಾಟದಲ್ಲಿ ಪಾಲ್ಗೊಂಡವರು.
ಮೂರ್ತಿಯವರು ಯಾವುದೇ ಒಂದು ಪಕ್ಷಕ್ಕೆ ಅಂಟಿಕೊಳ್ಳದೆ, ತನ್ನ ನಿಷ್ಠೆಯನ್ನು ರಾಜಕೀಯ ಪರಿಸ್ಥಿತಿಗಳು ಮತ್ತು ಜನತೆಯ ಹಿತವನ್ನು ಗಮನದಲ್ಲಿಟ್ಟುಕೊಂಡು ಹಲವಾರು ಪಕ್ಷಗಳಿಗೆ ತೋರಿಸಿದ್ದರು. ಮೂಲತಃ ಕಾಂಗ್ರೆಸ್ಸಿಗರಾದ ಅವರನ್ನು ಮೂಲೆಗುಂಪು ಮಾಡಿದ್ದೇ ಪಕ್ಷಾಂತರಕ್ಕೆ ಕಾರಣವಾಯಿತು. ಸಜ್ಜನ, ಅಪರೂಪದ, ವಿಶಿಷ್ಟ ಮತ್ತು ಶಿಸ್ತುಬದ್ಧ ರಾಜಕಾರಣಿಯಾಗಿ ರಾಜಕಾರಣಿಗಳಿಗೆ ಮಾದರಿಯಾಗಬೇಕಿದ್ದ ಅವರು ಕೊನೆಯ ದಿನಗಳಲ್ಲಿ ಇದ್ದೂ ಇಲ್ಲದಂತಾಗಿದ್ದರು.
ಟಿ. ನರಸೀಪುರದಿಂದ ಐದು ಬಾರಿ ಶಾಸಕರಾಗಿ, ರಾಜ್ಯದಲ್ಲಿ ಹಣಕಾಸು, ಅಬಕಾರಿ, ಕೈಗಾರಿಕೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಮೂರ್ತಿಯವರು, ಕೇಂದ್ರ ರಸ್ತೆ ಸಾರಿಗೆ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಅವರು 1952ರಿಂದ 1977ರವರೆಗೆ ಕಾಂಗ್ರೆಸ್, 1977ರಿಂದ 79ರವರೆಗೆ ಜನತಾಪಕ್ಷ, 1979ರಿಂದ 1999ರವರೆಗೆ ಕಾಂಗ್ರೆಸ್, 1999ರಿಂದ 2004ರವರೆಗೆ ಬಿಜೆಪಿ ಹಾಗೂ ನಂತರದ ಅವಧಿಯಲ್ಲಿ ಜೆಡಿಎಸ್ ಸದಸ್ಯರಾಗಿದ್ದರು.
ಅವರು ರಾಜಕೀಯ ಪ್ರವೇಶಿಸಿದ್ದು 1952ರಲ್ಲಿ. ಅದೇ ವರ್ಷ ಯಳಂದೂರಿನ ವಿಧಾನಸಭಾ ದ್ವಿಸದಸ್ಯ ಕ್ಷೇತ್ರದಿಂದ ಆಯ್ಕೆಯಾಗಿದ್ದವರು. ಇದು 1957ರಲ್ಲಿ ರದ್ದಾಗಿದ್ದರಿಂದ ನಂತರ ಟಿ. ನರಸೀಪುರದಿಂದ ಸ್ಪರ್ಧಿಸಿದ್ದರು. ಅಲ್ಲಿ 1957ರಂದ 1972ರವರೆಗೆ ಸತತವಾಗಿ ಗೆಲುವು ಸಾಧಿಸಿದರು.
1978ರಲ್ಲಿ ಟಿ. ನರಸೀಪುರ ಮೀಸಲು ಕ್ಷೇತ್ರವಾಗಿ ಮಾರ್ಪಾಡುಗೊಂಡ ಕಾರಣ, ಚಾಮುಂಡೇಶ್ವರಿಗೆ ಸ್ಥಳಾಂತರಗೊಂಡು ಡಿ. ಜಯದೇವರಾಜ ಅರಸು ಅವರೆದುರು ಸೋತರು.
1980ರಲ್ಲಿ ಮೊದಲ ಬಾರಿಗೆ ಮೈಸೂರು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. 1989ರಲ್ಲಿ ಸಿದ್ದರಾಮಯ್ಯ ಅವರನ್ನು ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಿ, ವೀರೇಂದ್ರ ಪಾಟೀಲ್ ಮತ್ತು ವೀರಪ್ಪ ಮೊಯ್ಲಿ ಸಂಪುಟದಲ್ಲಿ ಸಚಿವರಾಗಿದ್ದರು.
ನಂತರದ ದಿನಗಳಲ್ಲಿ ಕಾಂಗ್ರೆಸ್‌ನ ಆಂತರಿಕ ಭಿನ್ನಾಭಿಪ್ರಾಯಗಳಿಂದಾಗಿ ಮೂರ್ತಿಯವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿ ಪ್ರಧಾನಿ ಪಿ.ವಿ. ನರಸಿಂಹರಾವ್ ಸಚಿವ ಸಂಪುಟದಲ್ಲಿ ಭೂ ಸಾರಿಗೆ ಸಚಿವರನ್ನಾಗಿ ಮಾಡಲಾಗಿತ್ತು. 1999ರಲ್ಲಿ ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾದರು. 2004ರಲ್ಲಿ ಜೆಡಿಎಸ್‌ನಿಂದ ರಾಜ್ಯಸಭಾ ಸದಸ್ಯರಾಗಿದ್ದರು.