ನಾನೇನು ದೊಡ್ಡ ತಪ್ಪು ಮಾಡಿಲ್ಲ: ಕಟ್ಟಾ ಸುಬ್ರಹ್ಮಣ್ಯ ನಾಯ್ಡು
ಬೆಂಗಳೂರು, ಸೋಮವಾರ, 6 ಡಿಸೆಂಬರ್ 2010( 12:05 IST )
ನನ್ನ ಮೇಲೆ ಎಫ್ಐಆರ್ ಹಾಕಿದ್ದಕ್ಕೆ ಹೆದರಿ ಊರು ಬಿಟ್ಟು ಹೋಗಿಲ್ಲ. ನಾನು ಓಡಿಹೋಗುವಂಥ ತಪ್ಪನ್ನು ಮಾಡಿಲ್ಲ ಎಂದು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪ್ರತಿಕ್ರಿಯೆ ನೀಡಿದ್ದಾರೆ.
ಕೆಐಎಡಿಬಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರು ಕಟ್ಟಾ ವಿರುದ್ಧ ಎಫ್ಐಆರ್ ದಾಖಲಿಸಿದ ಬೆನ್ನಲ್ಲೇ, ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಅವರು ವೈಷ್ಣೋದೇವಿ ದರ್ಶನಕ್ಕೆ ತೆರಳಿದ್ದರು. ಆ ಸಂದರ್ಭದಲ್ಲಿ ಕಟ್ಟಾ ಅವರು ನಾಪತ್ತೆಯಾಗಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಇದೀಗ ತಾನು ಲೋಕಾಯುಕ್ತರು ನಡೆಸುವ ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತೇನೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲ ನಾನು ಯಾವುದಕ್ಕೂ ಹೆದರುವುದಿಲ್ಲ. ಸಾಕ್ಷ್ಯ ನಾಶ ಮಾಡುವ ಪ್ರಯತ್ನಕ್ಕೂ ಕೈಹಾಕುವುದಿಲ್ಲ. ಈಗ ನನ್ನ ವಿರುದ್ಧ ದಾಖಲಾಗಿರುವುದು ಆರೋಪ ಮಾತ್ರ. ಅದನ್ನು ಕಾನೂನು ಚೌಕಟ್ಟಿನಲ್ಲಿಯೇ ಎದುರಿಸುತ್ತೇನೆ ಎಂದು ನಾಯ್ಡು ಹೇಳಿದ್ದಾರೆ.
ಇಷ್ಟಕ್ಕೂ ನಾನು ಪಲಾಯನ ಮಾಡುವಂಥ ತಪ್ಪು ಮಾಡಿಲ್ಲ. ರಾಜಕೀಯ ಜೀವನದಲ್ಲಿ ಅನೇಕ ಹೋರಾಟಗಳನ್ನು ಮಾಡಿದ್ದೇನೆ. ಕೊನೆಯ ಉಸಿರು ಇರುವವರೆಗೂ ಹೋರಾಟ ಮಾಡುತ್ತೇನೆ. ಜತೆಗೆ ಗೆಲ್ಲುವ ವಿಶ್ವಾಸವೂ ಇದೆ ಎಂದರು. ವೈಷ್ಣೋದೇವಿ ದರ್ಶನ ಪಡೆದು ಮಂಗಳವಾರ ಬೆಂಗಳೂರಿಗೆ ವಾಪಸಾಗುವುದಾಗಿ ತಿಳಿಸಿದ್ದಾರೆ.