ಕೆಐಎಡಿಬಿ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಸದಸ್ಯ ಕಟ್ಟಾ ಜಗದೀಶ್ ನಾಯ್ಡು ಲೋಕಾಯುಕ್ತ ಎಎಸ್‌ಪಿ ರಾಧಾಮಣಿ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಸಾಕ್ಷಿದಾರನಿಗೆ ಲಂಚ ನೀಡಿದ ಪ್ರಕರಣ ಸೇರಿದಂತೆ ಎರಡೂ ಪ್ರಕರಣಗಳ ತನಿಖೆಗೆ ಹೈಕೋರ್ಟ್ ನವೆಂಬರ್ 8ರಂದು ತಡೆಯಾಜ್ಞೆ ನೀಡಿತ್ತು. ಆದರೂ ಲೋಕಾಯುಕ್ತ ಜಗದೀಶ್ ನಾಯ್ಡು ಅವರ ಬ್ಯಾಂಕ್ ಖಾತೆಯಲ್ಲಿನ ಹಣಕಾಸು ವ್ಯವಹಾರದ ಬಗ್ಗೆ ವಿವರ ನೀಡುವಂತೆ ನವೆಂಬರ್ 19ರಂದು ನೋಟಿಸ್ ಕೊಟ್ಟಿದ್ದರು ಎಂದು ಜಗದೀಶ್ ಪರ ವಕೀಲ ಸಿ.ವಿ.ನಾಗೇಶ್ ವಿವರಿಸಿದ್ದಾರೆ.
ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರೂ ಕೂಡ ಲೋಕಾಯುಕ್ತ ತನಿಖೆಯನ್ನು ಮುಂದುವರಿಸಿರುವುದು ನ್ಯಾಯಾಂಗ ನಿಂದನೆ ಆಗುತ್ತದೆ. ಹಾಗಾಗಿ ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ಯಾಕೆ ದಾಖಲಿಸಬಾರದು ಎಂದು ವಿವರ ಕೋರಿ ಲೋಕಾಯುಕ್ತ ಉಪ ಪೊಲೀಸ್ ವರಿಷ್ಠಾಧಿಕಾರಿ ರಾಧಾಮಣಿ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಅಷ್ಟೇ ಅಲ್ಲ ಲಂಚ ನೀಡಿದ್ದ ಪ್ರಕರಣದ ವೇಳೆ ತಮ್ಮನ್ನು ಬಂಧಿಸುವ ಅಗತ್ಯವಿರಲಿಲ್ಲವಾಗಿತ್ತು. ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು ಯಾಕೆ? ಎಂಬ ಆಕ್ಷೇಪವನ್ನೂ ಕೂಡ ಲೋಕಾಯುಕ್ತ ವಿರುದ್ಧ ಜಾರಿ ಮಾಡಿರುವ ನೋಟಿಸ್‌ನಲ್ಲಿ ಪ್ರಶ್ನಿಸಲಾಗಿದೆ. ಲೋಕಾಯುಕ್ತರು ಉದ್ದೇಶಪೂರ್ವಕವಾಗಿಯೇ ತಮ್ಮ ವಿರುದ್ಧ ಸಮರ ಸಾರುತ್ತಿದ್ದಾರೆ. ಎರಡು ಪ್ರಕರಣಗಳ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರು ಕೂಡ ಲೋಕಾಯುಕ್ತರು ಹಠ ಹಿಡಿದು ತನಿಖೆ ಮುಂದುವರಿಸುತ್ತಿರುವುದು ಸರಿಯಲ್ಲ ಎಂದು ಕಟ್ಟಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಒಂದೆಡೆ ಲೋಕಾಯುಕ್ತರು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಪುತ್ರ ಕಟ್ಟಾ ಜಗದೀಶ್ ನಾಯ್ಡು ವಿರುದ್ಧ ಭೂ ಹಗರಣ ಪ್ರಕರಣ ಕುರಿತಂತೆ ಬಿರುಸಿನ ತನಿಖೆ ಕೈಗೊಂಡಿದ್ದರೆ, ಮತ್ತೊಂದೆಡೆ ಕಟ್ಟಾ ಜಗದೀಶ್ ಇದೀಗ ಲೋಕಾಯುಕ್ತಕ್ಕೆ ನೋಟಿಸ್ ನೀಡುವ ಮೂಲಕ ಕಾನೂನು ಸಮರ ಆರಂಭಗೊಂಡಂತಾಗಿದೆ.