ಆಡಳಿತಾರೂಢ ಬಿಜೆಪಿ ಸರಕಾರ ಮತ್ತು ದೇವೇಗೌಡರ ಕುಟುಂಬದ ನಡುವಿನ ಆರೋಪ-ಪ್ರತ್ಯಾರೋಪ ಮುಂದುವರಿದಿದ್ದು, ಎಚ್.ಡಿ.ರೇವಣ್ಣ ಅವರು ಕೆಎಂಎಫ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕಚ್ಛಾ ವಸ್ತು ಖರೀದಿಯಲ್ಲಿ ಅವ್ಯವಹಾರ ನಡೆಸಿದ್ದು, ಇದರಿಂದ 2.13 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ಆರೋಪಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಬಿ.ಜೆ.ಪುಟ್ಟಸ್ವಾಮಿ ಅವರ ಜತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಬಚ್ಚೇಗೌಡರು, ರೇವಣ್ಣ ಅವರು ಕೆಎಂಎಫ್‌ನಲ್ಲಿ ಹಾಲಿನ ಕವರ್ ತಯಾರಿಸಲು ಕಚ್ಛಾ ವಸ್ತುವನ್ನು ತಮ್ಮ ಕುಟುಂಬದ ಸದ್ಯಸ್ಯರ ಕಂಪನಿಯಿಂದಲೇ ಖರೀದಿಸಿದ್ದರು ಎಂದರು.
ಕಚ್ಛಾ ವಸ್ತು ಖರೀದಿಗೆ ರಿಲಯನ್ಸ್ ಕಂಪನಿ ಜೊತೆ ಕೆಎಂಎಫ್ ಒಪ್ಪಂದ ಮಾಡಿಕೊಂಡಿತ್ತು. ಆದರೆ ತಮ್ಮ ಏಜೆನ್ಸಿಗಳಿಂದಲೇ ಖರೀದಿಸುವಂತೆ ರಿಲಯನ್ಸ್‌ನಿಂದ ಪತ್ರವೊಂದನ್ನು ಪಡೆದ ರೇವಣ್ಣ, ದೇವೇಗೌಡರ ಕುಟುಂಬದ ಸದಸ್ಯರು ಪಾಲುದಾರರಾಗಿರುವ ರಾಜರಾಜೇಶ್ವರಿ ಇಂಟರ್‌ನ್ಯಾಷನಲ್ ಪಾಲಿಮಾರ್ಸ್ ಮತ್ತು ಹಂಸ ಟ್ರೇಡಿಂಗ್ ಕಾರ್ಪೋರೇಷನ್ ಎಂಬ ಕಂಪನಿಗಳಿಂದ ಖರೀದಿ ಮಾಡಿದ್ದಾರೆ ಎಂದು ವಿವರಿಸಿದ್ದಾರೆ.
ಹಂಸ ಟ್ರೇಡಿಂಗ್ ಕಾರ್ಪೋರೇಷನ್‌ನಲ್ಲಿ ರೇವಣ್ಣ ಅವರ ಸಹೋದರಿಯರಾದ ಅನುಸೂಯ ಮಂಜುನಾಥ್ ಮತ್ತು ಶೈಲಾ ಚಂದ್ರಶೇಖರ್ ಪಾಲುದಾರರಾಗಿದ್ದರು. ಆದರೆ ಈ ವಿಷಯ ತನಗೆ ತಿಳಿದೇ ಇರಲಿಲ್ಲ ಎಂದು ರೇವಣ್ಣ ಸುಳ್ಳು ಹೇಳಿದ್ದರು. ಆ ಕಂಪನಿಯ ಜೊತೆ ವಹಿವಾಟು ನಡೆಸಿದ ಪರಿಣಾಮ 1997ರಿಂದ 2000ನೇ ವರ್ಷದಲ್ಲಿ ಕೆಎಂಎಫ್‌ಗೆ 2.13 ಕೋಟಿ ನಷ್ಟವಾಗಿದೆ ಎಂದು ದೂರಿದ್ದಾರೆ.