ಸ್ವಾಮೀಜಿಗಳು ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ಯಬೇಕೆ ವಿನಃ, ರಾಜಕೀಯದಲ್ಲಿ ಮೂಗು ತೂರಿಸುತ್ತಿರುವುದು ಹಣ ಮತ್ತು ಪೀಠದ ಆಸೆಗಾಗಿ ಎಂದು ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ ಪಾಟೀಲ ತಿಳಿಸಿದ್ದಾರೆ.
ನಗರದ ಯವನಿಕಾದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಬಾಬಾ ಸಾಹೇಬ್ ಅಂಬೇಡ್ಕರ್ ಅವರ 54ನೇ ಪರಿನಿರ್ವಾಣ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಪುಣೆ ಒಡಂಬಡಿಕೆ ಮತ್ತು ಪ್ರಸ್ತುತ ರಾಜಕೀಯದಲ್ಲಿ ಮಠಾಧಿಪತಿಗಳ ಪಾತ್ರ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಜನರ ಹಣವನ್ನು ಮಠಗಳಿಗೆ ಧಾರಾಳವಾಗಿ ನೀಡುತ್ತಿರುವುದರ ಪ್ರಭಾವವಿದು. ಸರಕಾರದ ಹಣ ಸಾರ್ವಜನಿಕರದ್ದು. ಇದರ ವಿರುದ್ಧ ಎಲ್ಲರೂ ದನಿ ಎತ್ತಬೇಕು ಎಂದರು. ಧರ್ಮ-ರಾಜಕೀಯ ಪ್ರತ್ಯೇಕವಾದುದು. ರಾಜಕಾರಣಿಗಳು ತಮ್ಮ ವೈಯಕ್ತಿಕ ನಂಬಿಕೆಗಳನ್ನು ದೇಶದ ಮೇಲೆ ಹೇರದೆ ತಮ್ಮ ಮನೆಗಳಲ್ಲಿಟ್ಟುಕೊಳ್ಳಲಿ ಎಂದು ಸಲಹೆ ನೀಡಿದರು.
ದಲಿತರಿಗೆ ಅಂಬೇಡ್ಕರ್ ಅವರ ಹೋರಾಟದ ಫಲ ಸಿಗದಂತೆ ಆಳುವ ಸರಕಾರಗಳು ಮೀಸಲಾತಿಯನ್ನು ಹಂತ ಹಂತವಾಗಿ ಮೊಟಕುಗೊಳಿಸುತ್ತಿವೆ ಎಂದು ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ರಾಜ್ಯ ವಕ್ತಾರ ಚಂದ್ರಕಾಂತ ಪೋಸ್ತೆ ಈ ಸಂದರ್ಭದಲ್ಲಿ ಮಾತನಾಡುತ್ತ ದೂರಿದರು.
ಡಾ.ಅಂಬೇಡ್ಕರ್ ಅವರು ಬ್ರಿಟಿಷರ ಜೊತೆ ಹೋರಾಡಿ ದಲಿತರಿಗೆ ವಿಶೇಷವಾದ ಪ್ರತ್ಯೇಕ ಮತಕ್ಷೇತ್ರ ಪಡೆದಿದ್ದರು. ಆದರೆ, ಗಾಂಧೀಜಿಯ ಕುತಂತ್ರದಿಂದ ಇದನ್ನು ಕೈಬಿಟ್ಟು ಮೀಸಲಿಗೆ ಒಪ್ಪಿಗೆ ಸೂಚಿಸಬೇಕಾಯಿತು. ಈಗ ನಮ್ಮ ಮುಂದಿನ ಪೀಳಿಗೆ ಹಿತದೃಷ್ಟಿಯಿಂದ ಮತ್ತೆ ಅದನ್ನು ಪಡೆಯಲು ನಾವೆಲ್ಲ ಹೋರಾಡಬೇಕಾದ ಅಗತ್ಯ ಇದೆ ಎಂದರು.