ಇಂದಿನಿಂದ್ಲೇ ಜಾರಿ; ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆ ಶಾಕ್!
ಬೆಂಗಳೂರು, ಮಂಗಳವಾರ, 7 ಡಿಸೆಂಬರ್ 2010( 13:20 IST )
PR
ಆಹಾರ ಬೆಲೆ ಏರಿಕೆಯ ನಡುವೆಯೇ ಇದೀಗ ವಿದ್ಯುತ್ ದರ ಹೆಚ್ಚಳ ಮಾಡುವ ಮೂಲಕ ರಾಜ್ಯದ ಜನತೆಗೆ ಮತ್ತೊಂದು ಶಾಕ್ ನೀಡಿದ್ದು, ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ ಎಂದು ಕೆಇಆರ್‌ಸಿ (ಕರ್ನಾಟಕ ವಿದ್ಯುತ್ ನಿಯಂತ್ರಣ ಪ್ರಾಧಿಕಾರ) ತಿಳಿಸಿದೆ.
ಬೆಸ್ಕಾಂ (ಬೆಂಗಳೂರು ಇಲೆಕ್ಟ್ರಿಸಿಟಿ ಸಪ್ಲೈ ಕಂಪನಿ) ಪ್ರತಿ ಯೂನಿಟ್‌ಗೆ 30.75 ಪೈಸೆ, ಹೆಸ್ಕಾಂ ( ಹುಬ್ಬಳ್ಳಿ ಇಲೆಕ್ಟ್ರಿಸಿಟಿ ಸಪ್ಲೈ ಕಂಪನಿ) ಪ್ರತಿ ಯೂನಿಟ್‌ಗೆ 28.64 ಪೈಸೆ, ಮೆಸ್ಕಾಂ (ಮಂಗಳೂರು ಇಲೆಕ್ಟ್ರಿಸಿಟಿ ಸಪ್ಲೈ ಕಂಪನಿ) ಪ್ರತಿ ಯೂನಿಟ್‌ಗೆ 26.63 ಪೈಸೆ, ಚೆಸ್ಕಾಂ (ಚಾಮುಂಡೇಶ್ವರಿ ಇಲೆಕ್ಟ್ರಿಸಿಟಿ ಸಪ್ಲೈ ಕಂಪನಿ ಮೈಸೂರು) ಪ್ರತಿ ಯೂನಿಟ್‌ಗೆ 28.53 ಪೈಸೆ ಹಾಗೂ ಜೆಸ್ಕಾಂ( ಗುಲ್ಬರ್ಗಾ ಇಲೆಕ್ಟ್ರಿಸಿಟಿ ಸಪ್ಲೈ ಕಂಪನಿ) ಪ್ರತಿ ಯೂನಿಟ್‌ಗೆ 29.63 ಪೈಸೆ ಏರಿಸಿರುವುದಾಗಿ ಕೆಇಆರ್‌ಸಿ ಅಧ್ಯಕ್ಷ ಶ್ರೀನಿವಾಸ ಮೂರ್ತಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ತಿಳಿಸಿದ್ದಾರೆ.
ಆದರೆ ಭಾಗ್ಯಲಕ್ಷ್ಮಿ, ಕುಟಿರಜ್ಯೋತಿ ಸಂಪರ್ಕಗಳಿಗೆ ವಿದ್ಯುತ್ ದರ ಏರಿಕೆಯಿಂದ ವಿನಾಯಿತಿ ನೀಡಲಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಬೆಂಗಳೂರು ಮತ್ತು ಮಂಗಳೂರು ಗ್ರಾಮಾಂತರ ಪ್ರದೇಶದಲ್ಲಿ 11 ತಾಸು ಸಿಂಗಲ್ ಫೇಸ್ ವಿದ್ಯುತ್ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 12 ತಾಸು ಸಿಂಗಲ್ ಫೇಸ್ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಮೂರ್ತಿ ವಿವರಿಸಿದ್ದಾರೆ.
ಏಕಾಏಕಿ ಏರಿಕೆ ಸರಿಯಲ್ಲ-ಎಚ್‌ಡಿಕೆ:ಏಕಾಏಕಿ ವಿದ್ಯುತ್ ದರ ಏರಿಸಿರುವುದು ಸರಿಯಲ್ಲ. ವಿದ್ಯುತ್ ದರ ಏರಿಕೆ ಮಾಡುವ ಮೂಲಕ ಜನ ವಿರೋಧಿ ಸರಕಾರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಗ್ರಾಮೀಣ ಪ್ರದೇಶದ ಭಾಗಗಳಲ್ಲಿಯೂ ವಿದ್ಯುತ್ ದರ ಏರಿಸಿರುವುದು ತುಂಬಾ ಹೊರೆಯಾಗಲಿದೆ. ಸಣ್ಣ-ಪುಟ್ಟ ಕೈಗಾರಿಕೆಗಳಿಗೆ ಇದರಿಂದ ದೊಡ್ಡ ಹೊಡೆತ ಬೀಳಲಿದೆ ಎಂದು ಈ ಸಂದರ್ಭದಲ್ಲಿ ಆರೋಪಿಸಿದರು.