ದೇವೇಗೌಡರ ಕುಟುಂಬದವರು ಗೋಮಾಳ, ಕೆರೆಯಂಗಳ ಕಬಳಿಸಿದ್ದಾರೆ ಎಂಬ ಹೇಳಿಕೆಗೆ ತಾನು ಬದ್ಧ ಎಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಬಿ.ಜೆ.ಪುಟ್ಟಸ್ವಾಮಿ, ಇನ್ನು ಎರಡು ದಿನ ತಡೆಯಿರಿ. ಗೌಡರ ಕುಟುಂಬಕ್ಕೆ ದೊಡ್ಡ ಶಾಕ್ ಕಾದಿದೆ ಎಂದು ಹೇಳುವ ಮೂಲಕ ಕುತೂಹಲ ಹುಟ್ಟುಹಾಕಿದ್ದಾರೆ.
ತಮ್ಮ ಅಧಿಕಾರದ ದಾಹಕ್ಕೆ ಏನೆಲ್ಲಾ ಕಸರತ್ತು ನಡೆಸುತ್ತಿರುವ ಗೌಡರ ಕುಟುಂಬ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವ ಕಾರ್ಯ ಮಾಡುತ್ತಿದೆ. ಆದರೆ ನಾನು ದೇವೇಗೌಡರ ಕುಟುಂಬಕ್ಕೆ ದೊಡ್ಡ ಶಾಕ್ ನೀಡುತ್ತೇನೆ. ಕಾದು ನೋಡಿ ಎಂದ ಪುಟ್ಟಸ್ವಾಮಿ ಆ ಮಾಹಿತಿ ಬಹಿರಂಗದಿಂದ ಗೌಡರ ಕುಟುಂಬ ಹೌಹಾರಿ ಹೋಗಲಿದೆ ಎಂಬುದಾಗಿ ತಿಳಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಿಡದಿ ಸಮೀಪದ ಹೊಸೂರು ಗ್ರಾಮದ ವ್ಯಾಪ್ತಿಯಲ್ಲಿ 26ಎಕರೆ ಭೂಮಿಯನ್ನು ತಮ್ಮ ಅತ್ತೆಯ ಹೆಸರಿನಲ್ಲಿ ಖರೀದಿಸಿದ್ದಾರೆ ಎಂದು ಆರೋಪಿಸಿದರು.
ಕುಮಾರಸ್ವಾಮಿ ಪತ್ನಿ, ಶಾಸಕಿ ಅನಿತಾ ಕುಮಾರಸ್ವಾಮಿ ಅವರ ತಾಯಿ ವಿಮಲ ಹೆಸರಿನಲ್ಲಿ ತಾವೇ ಹಣ ವಿನಿಯೋಗಿಸಿ ಜಮೀನು ಖರೀದಿಸಿದ್ದಾರೆ. ಕಂದಾಯ ನಿಯಮಾವಳಿ ಅನ್ವಯ ವಾರ್ಷಿಕ ಎರಡು ಲಕ್ಷ ರೂಪಾಯಿಗಿಂತ ಕಡಿಮೆ ಆದಾಯ ಹೊಂದಿದವರು ಮಾತ್ರ ಭೂಮಿ ಖರೀದಿಸಲು ಅರ್ಹರಾಗುತ್ತಾರೆ. ಆದರೆ ವಿಮಲ ಅವರ ಆದಾಯ ಅದಕ್ಕಿಂತ ದುಪ್ಪಟ್ಟಾಗಿದೆ.
ಈ ನಿಟ್ಟಿನಲ್ಲಿ ಸ್ಥಳೀಯ ಸಹಾಯಕ ಆಯುಕ್ತರು, ನಿಮ್ಮ ಜಮೀನನ್ನು ಯಾಕೆ ಮುಟ್ಟುಗೋಲು ಹಾಕಿಕೊಳ್ಳಬಾರದು ಎಂದು ಹಲವಾರು ಬಾರಿ ನೋಟಿಸ್ ನೀಡಿದ್ದರೂ ಕೂಡ ಯಾವುದೇ ಉತ್ತರ ನೀಡಿಲ್ಲ ಎಂದು ಪುಟ್ಟಸ್ವಾಮಿ ದೂರಿದ್ದಾರೆ.