ಭ್ರಷ್ಟಾಚಾರ ಅಸ್ತ್ರ-ಚುನಾವಣೆಗೆ ನಾವು ರೆಡಿ: ಸಿದ್ದರಾಮಯ್ಯ
ಬೆಂಗಳೂರು, ಮಂಗಳವಾರ, 7 ಡಿಸೆಂಬರ್ 2010( 18:37 IST )
ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಎದುರಿಸಲು ಕಾಂಗ್ರೆಸ್ ಪಕ್ಷ ಸಜ್ಜಾಗಿದ್ದು, ರಾಜ್ಯ ಬಿಜೆಪಿ ಸರಕಾರದ ಭ್ರಷ್ಟಾಚಾರ ಮತ್ತು ಮೀಸಲಾತಿಯಲ್ಲಿ ಹಿಂದುಳಿದವರಿಗೆ ಮಾಡಿರುವ ಅನ್ಯಾಯವೇ ಪ್ರಬಲ ಅಸ್ತ್ರ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯ ಸರಕಾರದ ಭ್ರಷ್ಟಾಚಾರ ಪ್ರಕರಣಗಳನ್ನು ಜನತೆಯ ಬಳಿಗೆ ಕೊಂಡೊಯ್ಯುತ್ತೇವೆ. ಈ ಭ್ರಷ್ಟ ಸರಕಾರದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುತ್ತಾ, ಪಂಚಾಯ್ತಿ ಚುನಾವಣೆಯಲ್ಲಿ ಮತಯಾಚಿಸುವುದಾಗಿ ಹೇಳಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಸಂಪುಟದ ಹಲವಾರು ಸಚಿವರು ಭ್ರಷ್ಟಾಚಾರದಲ್ಲಿ ಶಾಮೀಲಾಗಿದ್ದಾರೆ. ಆ ಪಕ್ಷದ ಹೈಕಮಾಂಡ್ ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಇರುವುದು ವಿಷಾದಕರ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಹೈಕಮಾಂಡ್‌ಗೆ ನೀತಿ ಪಾಠ ಹೇಳುವ ನೈತಿಕತೆ ಇಲ್ಲ. ಆ ಪಕ್ಷದಲ್ಲಿ ಹೈಕಮಾಂಡ್‌ಗೆ ತಾಕತ್ತೇ ಇಲ್ಲ ಎಂದು ಸಿದ್ದು ವ್ಯಂಗ್ಯವಾಡಿದರು. ರಾಜ್ಯದಲ್ಲಿ ಭ್ರಷ್ಟ ಸರಕಾರ ನಡೆಸುತ್ತಿರುವ ಬಿಜೆಪಿ ಲೋಕಸಭೆಯಲ್ಲಿ ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿ ಇಬ್ಬಗೆ ನೀತಿ ಅನುಸರಿಸುತ್ತಿದೆ ಎಂದು ದೂರಿದರು.