ಖಾಸಗಿ ವಲಯದಲ್ಲೂ ದಲಿತರಿಗೆ ಮೀಸಲು ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಆಗ್ರಹಿಸಿದ್ದಾರೆ.
ತುಮಕೂರಿನ ಎಂ.ಜಿ. ರಸ್ತೆಯ ಅಂಬೇಡ್ಕರ್ ಭವನದಲ್ಲಿ ಆದಿಜಾಂಬವ ಸಂಘಟನೆಗಳ ಒಕ್ಕೂಟದಿಂದ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಇಂದು ಸರಕಾರಿ ನೌಕರಿಯ ಹುದ್ದೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದಾಗಿ ಉದ್ಯೋಗದಲ್ಲಿ ದಲಿತ ಸಮುದಾಯಕ್ಕೆ ಸಿಗಬೇಕಾದ ಪ್ರಮಾಣದಲ್ಲಿ ಸಿಗುತ್ತಿಲ್ಲ. ಆದ್ದರಿಂದ ಖಾಸಗಿ ವಲಯದಲ್ಲೂ ಮೀಸಲು ನೀಡಬೇಕು ಎಂದರು.
ದಲಿತ ಜನಾಂಗದಲ್ಲಿ ಎಂಜಿನಿಯರಿಂಗ್ ಮುಗಿಸಿದವರು, ಡಾಕ್ಟರ್‌ಗಳು, ಶಿಕ್ಷಕರು ಇದ್ದಾರೆ. ಶೈಕ್ಷಣಿಕವಾಗಿ ಮುಂದುವರಿದಿದ್ದಾರೆ. ಆದ್ದರಿಂದ ಮೀಸಲು ನೀಡಿದರೆ ಅನರ್ಹರು ಸೇರಿಕೊಳ್ಳುತ್ತಾರೆಂದು ಭಯಪಡಬೇಕಾದ ಅಗತ್ಯವಿಲ್ಲ. ಆದ್ದರಿಂದ ಖಾಸಗಿ ವಲಯದಲ್ಲೂ ಮೀಸಲು ನಿಗದಿ ಆಗಬೇಕು ಎಂದು ಒತ್ತಾಯಿಸಿದರು.
ನಾನು ಒಳ ಮೀಸಲು ವಿರೋಧಿ ಅಲ್ಲ ಎಂದ ಅವರು, ಎಸ್.ಎಂ. ಕೃಷ್ಣರ ಸಚಿವ ಸಂಪುಟದಲ್ಲಿ ಒಳ ಮೀಸಲು ಪರ ನಾನು, ಮೋಟಮ್ಮ, ಖರ್ಗೆ ದನಿ ಎತ್ತಿದೆವು. ನಿವೃತ್ತ ನ್ಯಾಯಾಧೀಶ ಎನ್.ವೈ.ಹನುಮಂತಪ್ಪ ಅಧ್ಯಕ್ಷತೆಯಲ್ಲೇ ಒಳ ಮೀಸಲು ವರ್ಗೀಕರಣಕ್ಕೆ ಸಮಿತಿ ರಚಿಸಬೇಕೆಂದು ಪಟ್ಟು ಹಿಡಿದೆವು. ನಾನು ಒಳ ಮೀಸಲು ವಿರೋಧಿ ಎಂಬ ಆರೋಪ ಸುಳ್ಳು ಎಂದರು.