ತಮಿಳುನಾಡು ದೇವಸ್ಥಾನಕ್ಕೆ ಹಣ ಯಾವ ಪುರುಷಾರ್ಥಕ್ಕೆ?: ಅನಿತಾ
ಮಧುಗಿರಿ, ಬುಧವಾರ, 8 ಡಿಸೆಂಬರ್ 2010( 15:31 IST )
'ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿರುವುದು ತಮ್ಮ ಕುಟುಂಬದ ಅಭಿವೃದ್ಧಿ ಹಾಗೂ ಮಠ-ಮಾನ್ಯಗಳ ಉದ್ದಾರಕ್ಕಷ್ಟೇ' ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಟೀಕಿಸಿದ್ದಾರೆ.
ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ತಾಲೂಕು ಜೆಡಿಎಸ್ ವತಿಯಿಂದ ಜಿ.ಪಂ. ಹಾಗೂ ತಾ.ಪಂ. ಚುನಾವಣೆಗಳ ಪೂರ್ವಸಿದ್ಧತೆಗಾಗಿ ಏರ್ಪಡಿಸಿದ್ದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಸರಕಾರದಂತಹ ಭ್ರಷ್ಟ ಸರಕಾರವನ್ನು ರಾಜ್ಯ ಎಂದೂ ಕಂಡಿಲ್ಲ. ಸಿಎಂ ಕುಟುಂಬದ ಬ್ಯಾಂಕ್ ಖಾತೆಗೆ ಹಣ ನೇರವಾಗಿ ಜಮಾವಾಗುತ್ತದೆ. ಈ ಬಗ್ಗೆ ಯಾವುದೇ ಭಯ ಸಹ ಮುಖ್ಯಮಂತ್ರಿಗಿಲ್ಲ. ಎಲ್ಲವನ್ನು ಬಿಟ್ಟು ಹಣ ಮಾಡುವ ದಂಧೆಯಲ್ಲಿ ನಿರತರಾಗಿದ್ದಾರೆ ಎಂದು ದೂರಿದರು.
ರಾಜ್ಯದ ಬಡಜನತೆ ಏನಾದರೂ ಆಗಲಿ ಸಿಎಂಗೆ ಚಿಂತೆ ಇಲ್ಲ. ತಮಿಳುನಾಡಿನ ದೇವಸ್ಥಾನದ ಅಭಿವೃದ್ಧಿಗೆ 1 ಕೋಟಿ ರೂ.ಗಳನ್ನು ಘೋಷಿಸಿದ್ದು ಯಾವ ಪುರುಷಾರ್ಥಕ್ಕೆ. ಹೊರ ರಾಜ್ಯದ ದೇವಸ್ಥಾನಕ್ಕೆ ಹಣ ನೀಡುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಆಡಳಿತ ಕಂಡಿದ್ದ ಜನತೆ ಬಿಜೆಪಿಯನ್ನು ಬೆಂಬಲಿಸಿ ಭ್ರಮ ನಿರಸನಕ್ಕೊಳಗಾಗಿದ್ದಾರೆ. ಜೆಡಿಎಸ್ ಕಾರ್ಯಕರ್ತರು ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ರಾಜ್ಯದ ಅಭಿವೃದ್ಧಿ ಜತೆಗೆ ಬಡವರಿಗೆ ಅನುಕೂಲವಾಗುವ ಯೋಜನೆ ರೂಪಿಸಿದ್ದನ್ನು ಮತದಾರರಿಗೆ ತಿಳಿಸುವ ಕೆಲಸವನ್ನು ಸಕ್ರಿಯವಾಗಿ ಮಾಡಬೇಕು ಎಂದರು.
'ಜೆಡಿಎಸ್ ಕಾರ್ಯಕರ್ತರು ಯಾವುದೇ ಸಂದರ್ಭದಲ್ಲಿ ಮತದಾರರೊಂದಿಗೆ ಉಡಾಫೆಯಾಗಿ ಮಾತನಾಡಬಾರದು. ಗ್ರಾಮಾಂತರ ಪ್ರದೇಶದಲ್ಲಿ ವೃದ್ದಾಪ್ಯ, ವಿಕಲಚೇತನ ವೇತನ, ಪಡಿತರ ಚೀಟಿಗಳಿಗಾಗಿ ನನ್ನ ಬಳಿ ಬಂದು ಅರ್ಜಿ ನೀಡುತ್ತಿದ್ದಾರೆ. ಇದು ಮರಕಳಿಸಬಾರದು. ಕಾರ್ಯಕರ್ತರು ಜವಾಬ್ದಾರಿ ವಹಿಸಿ ಸಾರ್ವಜನಿಕರ ಕೆಲಸ ಮಾಡಬೇಕು' ಎಂದು ಹೇಳಿದರು.