ವಿದ್ಯುತ್ ಲೆಕ್ಕ ಪರಿಶೋಧನೆ ಬಗ್ಗೆ ಕ್ರಮ: ಶೋಭಾ ಕರಂದ್ಲಾಜೆ
ಶಿವಮೊಗ್ಗ, ಬುಧವಾರ, 8 ಡಿಸೆಂಬರ್ 2010( 15:33 IST )
ರಾಜ್ಯದಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟು ವಿದ್ಯುತ್ ಬಳಕೆಯಾಗುತ್ತಿದೆ ಎಂಬುದನ್ನು ತಿಳಿಯುವ ಉದ್ದೇಶದಿಂದ ವಿದ್ಯುತ್ ಲೆಕ್ಕಪರಿಶೋಧನೆ ಕೈಗೊಳ್ಳಲಾಗುವುದು ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಜೋಗದಲ್ಲಿ ಶರಾವತಿ ಕಣಿವೆ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೈಗಾರಿಕೆ, ಗೃಹ, ಬೀದಿ ದೀಪ, ರೈತರ ಪಂಪ್ ಸೆಟ್ ಸೇರಿದಂತೆ ಯಾವ ಕ್ಷೇತ್ರಕ್ಕೆ ಎಷ್ಟು ಪ್ರಮಾಣದಲ್ಲಿ ವಿದ್ಯುತ್ ಬಳಕೆಯಾಗುತ್ತಿದೆ ಎಂಬುದನ್ನು ಇದೂವರೆಗೆ ಲೆಕ್ಕ ಪರಿಶೋಧನೆ ಮಾಡಿಲ್ಲ. ಇದು ಸಮರ್ಪಕ ವಿದ್ಯುತ್ ವಿತರಣೆಗೆ ತೊಂದರೆಯಾಗುತ್ತಿರುವುದರಿಂದ ಲೆಕ್ಕಪರಿಶೋಧನೆಗೆ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದರು.
ಲೆಕ್ಕಪರಿಶೋಧನೆ ಮಾಡಬೇಕಾದಲ್ಲಿ ಎಲ್ಲ ಘಟಕಗಳಿಗೆ ಮೀಟರ್ ಅಳವಡಿಸಬೇಕು. ರೈತರ ಪಂಪ್ ಸೆಟ್‌ಗಳಿಗೆ ಮೀಟರ್ ಇಲ್ಲದೆ ರೈತರು ಎಷ್ಟು ಪ್ರಮಾಣದಲ್ಲಿ ವಿದ್ಯುತ್ ಬಳಕೆ ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಹೀಗಾಗಿ ಮೀಟರ್ ಅಳವಡಿಕೆಗೆ ರೈತರ ಮನವೊಲಿಸಲಾಗುವುದು. ಇದು ಅನಿವಾರ್ಯ ಸಹ ಆಗಿರುವುದರಿಂದ ರೈತರು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
ರಾಜ್ಯದಲ್ಲಿ ಶೇ. 22ರಷ್ಟಿರುವ ವಿದ್ಯುತ್ ಸೋರಿಕೆ ನಿಯಂತ್ರಿಸಲು ಬಹಳಷ್ಟು ಕ್ರಮ ಕೈಗೊಳ್ಳಲಾಗಿದೆ. ವಿದ್ಯುತ್ ಕಳವು ನಿಯಂತ್ರಿಸುವ ನಿಟ್ಟಿನಲ್ಲಿ ಪ್ರತಿ ಘಟಕಕ್ಕೂ ಸ್ಮಾರ್ಟ್ ಗ್ರಿಡ್ ಅಳವಡಿಕೆಗೆ ಚಿಂತಿಸಲಾಗಿದೆ. ಮಂಗಳೂರಿನ ಒಂದು ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗಿದೆ. ಅದರ ಫಲಿತಾಂಶವನ್ನು ಆಧರಿಸಿ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಜ್ಯದ ಬೇಡಿಕೆಗೆ ಅನುಗುಣವಾಗಿ ನಿತ್ಯ ಒಂದು ಸಾವಿರ ಮೆಗಾವ್ಯಾಟ್ ವಿದ್ಯುತ್ ಖರೀದಿ ಮಾಡಲಾಗುತ್ತಿದೆ. ಪ್ರಸ್ತುತ ಎಲ್ಲ ಮೂಲಗಳಿಂದ 121 ಮಿಲಿಯನ್ ಯೂನಿಟ್ ವಿದ್ಯುತ್ ಲಭ್ಯವಾಗುತ್ತಿದ್ದು, ಬೇಡಿಕೆ ಮತ್ತು ಖರ್ಚು ಸಮನಾಗಿದೆ. ಡಿಸೆಂಬರ್ ಅಂತ್ಯದಿಂದ ವಿದ್ಯುತ್ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಜನವರಿಯಿಂದ ಮೇ ವರೆಗೆ ಮತ್ತೆ 250ರಿಂದ 300 ಮೆಗಾವ್ಯಾಟ್ ವಿದ್ಯುತ್ ಖರೀದಿಗೆ ಚಿಂತನೆ ನಡೆಸಲಾಗಿದೆ. ಛತ್ತೀಸ್‌ಗಢ ಮತ್ತು ಖಾಸಗಿ ಸಕ್ಕರೆ ಕಾರ್ಖಾನೆ ಮೂಲಗಳಿಂದ ವಿದ್ಯುತ್ ಖರೀದಿ ಮಾಡಲಾಗುವುದು ಎಂದು ತಿಳಿಸಿದರು.