ಜೆಡಿಎಸ್ ಅಧಿಕಾರದ ಗದ್ದುಗೆ ಏರುವುದು ನಿಶ್ಚಿತ: ರೇವಣ್ಣ ಭವಿಷ್ಯ
ಸೋಮವಾರಪೇಟೆ, ಬುಧವಾರ, 8 ಡಿಸೆಂಬರ್ 2010( 15:35 IST )
ಐವತ್ತು ವರ್ಷಗಳಲ್ಲಿ ರಾಜ್ಯ ಕಂಡ ಅತ್ಯಂತ ಭ್ರಷ್ಟ ಸರಕಾರ ಪತನದ ಅಂಚಿನಲ್ಲಿದೆ. 2011ರಲ್ಲಿ ಚುನಾವಣೆ ನಡೆಯವುದು ಖಚಿತ ಎಂದು ಜೆಡಿ(ಎಸ್) ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ರೇವಣ್ಣ ಭವಿಷ್ಯ ನುಡಿದಿದ್ದಾರೆ.
ಸೋಮವಾರಪೇಟೆ ತಾಲೂಕು ಜಾತ್ಯತೀತ ಜನತಾದಳದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸೋಮವಾರಪೇಟೆ ತಾಲೂಕು ಮಟ್ಟದ ಕಾರ್ಯಕರ್ತರ ಸಮಾವೇಶ ಹಾಗೂ ಜನತಾದಳ ಬೆಂಬಲಿತ ಗ್ರಾ.ಪಂ. ಸದಸ್ಯರಿಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭೂ ಕಬಳಿಕೆ, ಅಕ್ರಮ ಹಣ, ಕುಟುಂಬದ ಸದಸ್ಯರ ಖಾತೆಗೆ ಕೋಟ್ಯಂತರ ಹಣ ತುಂಬಿಸಿದ ಭ್ರಷ್ಟ ಮುಖ್ಯಮಂತ್ರಿ ರಾಜ್ಯದ ಜನತೆಯ ಮುಂದೆ ತಪ್ಪು ಮಾಡಿದ್ದೇನೆ, ಕ್ಷಮಿಸಿ. ಇನ್ಮುಂದೆ ಹೀಗೆ ಮಾಡುವುದಿಲ್ಲ ಎಂದು ಅಂಗಲಾಚುತ್ತಿರುವುದು ದುರಂತ ಎಂದು ಹೇಳಿದರು.
2011 ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿ(ಎಸ್) ಅಧಿಕಾರಕ್ಕೆ ಬರುವುದು ನಿಶ್ಚಿತ. ಎಂ.ಸಿ. ನಾಣಯ್ಯ, ಬಿ.ಎ. ಜೀವಿಜಯ ಸಚಿವರಾಗುವರು ಎಂದ ಅವರು, 1983 ಹಾಗೂ 1989ರ ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ ನೇತೃತ್ವದಲ್ಲಿ ದಳ ಸರಕಾರವನ್ನು ಪುನರಾವರ್ತಿಸುವ ಸಮಯ ಬಂದಿದೆ. ಪ್ರಾಥಮಿಕ ಹಂತವಾಗಿ ಕೊಡಗಿನಿಂದ ಬಿಜೆಪಿಯನ್ನು ಹೊರಹಾಕಬೇಕೆಂದು ವಿಧಾನಪರಿಷತ್ ಸದಸ್ಯ ರೇವಣ್ಣ ಹೇಳಿದರು.
ಭ್ರಷ್ಟಾಚಾರದಲ್ಲಿ ರಾಜ್ಯವನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದ ಮುಖ್ಯಮಂತ್ರಿ ಎಂದರೆ ಯಡಿಯೂರಪ್ಪ. ಅವರ ಕುಟುಂಬ ಹಾಗೂ ಸಂಬಂಧಿಕರು 20 ಸಾವಿರ ಕೋಟಿ ರೂ.ಗಿಂತಲೂ ಅಧಿಕ ಜಮೀನನ್ನು ಡಿನೋಟಿಫೈ ಮೂಲಕ ಹೊಂದಿರುವ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ. ಭೂ ಹಗರಣದ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿದ ಸರಕಾರದ ಶಿಫಾರಸು ಸ್ಮಶಾನಕ್ಕೆ ಹೋದ ಹೆಣದಂತೆ. ಲೋಕಾಯುಕ್ತರಿಗೆ ಪರಮಾಧಿಕಾರ ನೀಡುವುದು ಅವಶ್ಯ ಎಂದು ಈ ಸಂದರ್ಭದಲ್ಲಿ ತಿಳಿಸಿದರು.