ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ವಿಶ್ವೇಶ್ವರ ಭಟ್ರು ವಿಜಯ ಕರ್ನಾಟಕ ಪತ್ರಿಕೆ ಬಿಟ್ರು! (Vishweshwar Bhat Resign | Vijay Karnataka | Kannada News Paper | Kannada Daily)
Bookmark and Share Feedback Print
 
NRB
ವಿಶೇಷ, ಆಕರ್ಷಕ ತಲೆಬರಹಗಳಿಗೇ ಪ್ರಸಿದ್ಧವಾಗಿದ್ದ, ಹೊಸತನ ಮತ್ತು ಹೊಸ ಪ್ರಯೋಗಗಳಿಗೆ ಹೆಸರಾಗಿದ್ದ, ಕರ್ನಾಟಕದ ನಂಬರ್ 1 ಕನ್ನಡ ದಿನಪತ್ರಿಕೆ ವಿಜಯ ಕರ್ನಾಟಕದ ಸಂಪಾದಕ ವಿಶ್ವೇಶ್ವರ ಭಟ್ ಅವರು ಪತ್ರಿಕೆಯ ಕಾರ್ಯ ನಿರ್ವಾಹಕ ವ್ಯವಸ್ಥಾಪಕ ಸಂಪಾದಕ (ಇಎಂಇ) ಹುದ್ದೆಗೆ ಬುಧವಾರ ರಾಜೀನಾಮೆ ನೀಡಿದ್ದಾರೆ.

ಒಂಬತ್ತು ವರ್ಷಗಳ ಹಿಂದೆ ವಿಜಯಾನಂದ ರೋಡ್‌ಲೈನ್ಸ್‌ನ ವಿಜಯ ಸಂಕೇಶ್ವರ ಮಾಲೀಕತ್ವದಲ್ಲಿದ್ದ, ಈಗ ಟೈಮ್ಸ್ ಆಫ್ ಇಂಡಿಯಾ ಬಳಗದ ತೆಕ್ಕೆಯಲ್ಲಿರುವ ವಿಜಯ ಕರ್ನಾಟಕದ ಸಂಪಾದಕೀಯ ವಿಭಾಗದ ನೇತೃತ್ವವನ್ನು ವಿಶ್ವೇಶ್ವರ ಭಟ್ಟರು ವಹಿಸಿಕೊಂಡಿದ್ದಾಗ ಅದರ ಪ್ರಸರಣ ಸಂಖ್ಯೆ ಸುಮಾರು ಒಂದು-ಒಂದುವರೆ ಲಕ್ಷದಷ್ಟು. ಈಗ ಸರಿ ಸುಮಾರು ಆರು ಲಕ್ಷದ ಮಟ್ಟಕ್ಕೆ ಏರಿಸಿರುವುದರಲ್ಲಿ ವಿಶ್ವೇಶ್ವರ ಭಟ್ಟರ ಶ್ರಮ ಪ್ರಶ್ನಾತೀತವಾದದ್ದು ಮತ್ತು ಅವರು ಓದುಗರಿಗೆ ಹತ್ತಿರವಾಗಿದ್ದ ಸಂಪಾದಕರೆಂದೂ ಹೆಸರು ಪಡೆದಿದ್ದರು.

ವಿಜಯಕರ್ನಾಟಕದ ಸಂಸ್ಥಾಪಕ ಸಂಪಾದಕರಾಗಿದ್ದ ಈಶ್ವರ ದೈತೋಟ ಅವರ ನಿರ್ಗಮನದ ನಂತರ ಮುಖ್ಯ ವರದಿಗಾರರಾಗಿದ್ದ ಮಹಾದೇವಪ್ಪ ಅವರು ಸಂಪಾದಕೀಯ ವಿಭಾಗದ ಮುಂದಾಳುತ್ವಕ್ಕೆ ಏರಿಸಲ್ಪಟ್ಟಿದ್ದರು. ಅದೇ ಸಂದರ್ಭದಲ್ಲಿ ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರಾಗಿದ್ದ ವಿಶ್ವೇಶ್ವರ ಭಟ್, ಮಹಾದೇವಪ್ಪ ಅವರಿಂದ ತೆರವಾದ ಸ್ಥಾನ ತುಂಬಿದರು. ಪತ್ರಿಕೆಗೆ ಹೊಸತನ ತುಂಬಿ ಮತ್ತು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ, ದಿನಕ್ಕೊಂದು ಅಂಕಣದ ಪರಿಕಲ್ಪನೆಯನ್ನೂ ತಂದರು. ತಾವೂ ಸ್ವತಃ ನೂರೆಂಟು ಮಾತು, ಸುದ್ದಿ ಮನೆ ಕಥೆ, ವಕ್ರತುಂಡೋಕ್ತಿ, ಜನಗಳ ಮನ ಮುಂತಾದ ಅಂಕಣಗಳನ್ನು ಬರೆದು ಪತ್ರಿಕೆಯೊಂದಿಗೆ ತಾವೂ ಬೆಳೆದರು.

ಬುಧವಾರ ಬೆಳಗ್ಗಿನವರೆಗೂ ರಾಜೀನಾಮೆ ಕುರಿತು ಯಾವುದೇ ಸುಳಿವಿರಲಿಲ್ಲ. ಮಧ್ಯಾಹ್ನ ಟೈಮ್ಸ್ ಬಳಗದ ಮೇಲಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಬಳಿಕ, ವಿಜಯ ಕರ್ನಾಟಕ ಸಿಬ್ಬಂದಿಗಳಿಗೆ ಭಟ್ ಅವರು ತಮ್ಮ ರಾಜೀನಾಮೆಯ ಅಧಿಕೃತ ಘೋಷಣೆ ಮಾಡಿದಾಗ ಅವರೆಲ್ಲರಿಗೂ ಶಾಕ್ ಆಗಿತ್ತು. ಮತ್ತು ಅವರ ಮುಂದಿನ ನಡೆ ಏನು ಎಂಬುದು ಎಷ್ಟು ಕುತೂಹಲವೋ, ಅಷ್ಟೇ ನಿಗೂಢವಾಗಿಯೂ ಇದೆ.

ಈ ನಡುವೆ, ವಿಜಯ್‌ನೆಕ್ಸ್ಟ್ ಎಂಬ ಸಾಪ್ತಾಹಿಕ ಸಂಚಿಕೆಯ ಸಂಪಾದಕರಾಗಿದ್ದ, ಇ.ರಾಘವನ್ (ಇಕನಾಮಿಕ್ ಟೈಮ್ಸ್ ನಿವೃತ್ತ ಸಂಪಾದಕ) ಅವರು ವಿಜಯ ಕರ್ನಾಟಕದಲ್ಲಿ ವಿಶ್ವೇಶ್ವರ ಭಟ್ ತೆರವು ಮಾಡಿದ ಸ್ಥಾನವನ್ನು ಅಲಂಕರಿಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಇದೀಗ ಅವರು ತೆರವುಗೊಳಿಸಿದ ಸ್ಥಾನ ತುಂಬುವವರು ಯಾರು ಎಂಬ ಬಗ್ಗೆ ಗಾಸಿಪ್‌ಗಳು ಪತ್ರಿಕಾ ವಲಯದಲ್ಲಿ ಹರಿದಾಡುತ್ತಿದೆ. ಅವರು ರಾಜೀನಾಮೆ ನೀಡಿರುವುದಕ್ಕೆ ಕುರಿತಾಗಿಯೂ ಗಾಸಿಪ್‌ಗಳಿಗೆ ಬರವಿಲ್ಲ. ಅವುಗಳಲ್ಲಿ ಕೆಲವು: ಅವರು ಜನಾರ್ದನ ರೆಡ್ಡಿ-ಶ್ರೀರಾಮುಲು ಹೊರತರುತ್ತಿರುವ ಜನಶ್ರೀ ಟೆಲಿವಿಷನ್ ಚಾನೆಲ್‌ಗೋ, ಅಥವಾ ಪತ್ರಿಕೆಗೋ ಹೋಗುತ್ತಾರಂತೆ... ಟೈಮ್ಸ್ ಆಡಳಿತ ಮಂಡಳಿ ಜೊತೆ ಏನೋ ಸರಿಬರಲಿಲ್ಲವಂತೆ... ಹೀಗಾಗಿ ರಾಜೀನಾಮೆ ನೀಡಿದರಂತೆ... ಇತ್ತೀಚೆಗೆ ವಿಜಯ ಕರ್ನಾಟಕವನ್ನು ಗಮನಿಸಿದರೆ, ಅದರ ಉದ್ದೇಶಗಳೇನೋ ಬದಲಾದಂತೆ ತೋರುತ್ತಿದೆ. ಈ ಒತ್ತಡ ತಾಳದೆ ರಾಜೀನಾಮೆ ಕೊಟ್ಟುಬಿಟ್ಟರಂತೆ...

ಊಹಾಪೋಹಗಳೇನೇ ಇದ್ದರೂ, ವಿಶ್ವೇಶ್ವರ ಭಟ್ ಅವರು ತಮ್ಮ ನಿರ್ಗಮನಕ್ಕೆ ತಮ್ಮದೇ ಸಂಪಾದಕೀಯ ಬಳಗಕ್ಕೆ ನೀಡಿದ ಅಧಿಕೃತ ಕಾರಣವೆಂದರೆ, ಉನ್ನತ ವ್ಯಾಸಂಗ ನಡೆಸುವ ಉದ್ದೇಶ ಮತ್ತು ತಾನು ಎಲ್ಲವೂ ಸರಿ ಇರುವಾಗಲೇ, ಸಂತೋಷದಿಂದ ಇದರಿಂದ ನಿರ್ಗಮಿಸುತ್ತಿದ್ದೇನೆ ಎಂದೂ ಅವರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ