ಡಿಸೆಂಬರ್ 26ರಂದು ನಡೆಯಲಿರುವ ಮೊದಲ ಹಂತದ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಬುಧವಾರದಿಂದ ಆರಂಭವಾಗಿದೆ.
ಮೊದಲ ಹಂತದಲ್ಲಿ 15 ಜಿಲ್ಲೆಗಳ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಗಳಿಗೆ ಚುನಾವಣೆ ನಡೆಯಲಿದ್ದು, ಜಿಲ್ಲಾಧಿಕಾರಿಗಳು ಇಂದು ಅಧಿಸೂಚನೆ ಹೊರಡಿಸುವ ಮೂಲಕ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ ದೊರೆತಿದೆ.
ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ತುಮಕೂರು, ಬೀದರ್, ಬಳ್ಳಾರಿ, ರಾಯಚೂರು, ಗುಲ್ಬರ್ಗಾ, ಯಾದಗಿರಿ ಜಿಲ್ಲಾ ಪಂಚಾಯ್ತಿ ಮತ್ತು ಅವುಗಳ ವ್ಯಾಪ್ತಿಯಲ್ಲಿರುವ 1728 ತಾಲೂಕು ಪಂಚಾಯ್ತಿಗಳಿಗೆ ಚುನಾವಣೆ ನಡೆಯಲಿದೆ.
ನಾಮಪತ್ರ ಸಲ್ಲಿಕೆಗೆ ಡಿಸೆಂಬರ್ 15 ಕೊನೆ ದಿನವಾಗಿದ್ದು, ನಾಮಪತ್ರಗಳ ಪರಿಶೀಲನೆ 16ರಂದು ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಡಿಸೆಂಬರ್ 18 ಕೊನೆ ದಿನವಾಗಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾದ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಳ್ಳತೊಡಗಿದೆ. ಎರಡನೇ ಹಂತದ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಡಿಸೆಂಬರ್ 31ರಂದು ನಡೆಯಲಿದ್ದು, ಮತ ಎಣಿಕೆ ಜನವರಿ 4ರಂದು ನಡೆಯಲಿದೆ.