ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಅವರ ಹೇಳಿಕೆಯಿಂದ ಮನಸಿಗೆ ತುಂಬಾ ನೋವಾಗಿದೆ. ನಾನು ರಾಜೀನಾಮೆ ವಾಪಸ್ ಪಡೆದು ತಪ್ಪು ಮಾಡಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ತಿಳಿಸಿದ್ದಾರೆ.
ನವದೆಹಲಿಗೆ ಆಗಮಿಸಿದ್ದ ಅವರು ಸುದ್ದಿಗಾರರ ಜತೆ ಮಾತನಾಡುತ್ತ, ಮಂಗಳವಾರ ರಾಜ್ಯಕ್ಕೆ ಆಗಮಿಸಿದ್ದ ಗಡ್ಕರಿ ಅವರು ಲೋಕಾಯುಕ್ತರು ವಿಪಕ್ಷ ನಾಯಕರಂತೆ ವರ್ತಿಸುತ್ತಿದ್ದಾರೆ ಎಂಬ ಹೇಳಿಕೆ ಕುರಿತ ಪ್ರಶ್ನೆಗೆ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.
ಲೋಕಾಯುಕ್ತಕ್ಕೆ ಪರಮಾಧಿಕಾರ ಹಾಗೂ ಉಪ ಲೋಕಾಯುಕ್ತ ನೇಮಕಾತಿ ಸಂಬಂಧ ಅಸಮಾಧಾನ ವ್ಯಕ್ತಪಡಿಸಿ ಹುದ್ದೆಗೆ ರಾಜೀನಾಮೆ ಕೊಟ್ಟ ಸಂದರ್ಭದಲ್ಲಿ ನಿತಿನ್ ಗಡ್ಕರಿ ಅವರು ನಮ್ಮ ಮನೆಗೆ ಬಂದು ರಾಜೀನಾಮೆ ವಾಪಸ್ ಪಡೆಯಬೇಕೆಂದು ಮನವೊಲಿಸಿದ್ದರು. ಆದರೆ ಇದೀಗ ಅವರು ಆ ಘಟನೆಯನ್ನು ಮರೆತಂತಿದೆ ಎಂದರು.
ಭೂ ಹಗರಣದ ತನಿಖೆಗೆ ನ್ಯಾಯಾಲಯದ ಮುಂದಿದೆ. ಆದರೂ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಿರುವುದು ಎಷ್ಟು ಸರಿ ಎಂದು ಹೆಗ್ಡೆ ಈ ಸಂದರ್ಭದಲ್ಲಿ ಪ್ರಶ್ನಿಸಿದ್ದಾರೆ. ನಾನು ಯಾವುದೇ ಪಕ್ಷದ ಪರ ಅಲ್ಲ, ನ್ಯಾಯಯುತವಾಗಿ ಕರ್ತವ್ಯ ನಿರ್ವಹಿಸುತ್ತಾ ಇದ್ದೇನೆ. ಆದರೂ ನನ್ನನ್ನು ವಿಪಕ್ಷದ ನಾಯಕನ ತರ ಕೆಲಸ ಮಾಡುತ್ತಿರುವುದಾಗಿ ಆರೋಪಿಸಿರುವುದು ತುಂಬಾ ನೋವು ತಂದಿದೆ ಎಂದು ಹೇಳಿದರು.