ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿ.ಎಸ್. ಯಡಿಯೂರಪ್ಪ ಜೈಲಿಗೆ ಹೋಗಬೇಕಾಗುತ್ತದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ, ಜಿಲ್ಲಾ ಪಂಚಾಯತ್ ಚುನಾವಣೆ ಮುಗಿದ ಬಳಿಕ ಯಾರು ಎಲ್ಲಿಗೆ ಹೋಗುತ್ತಾರೆ ಎಂಬುದು ಗೊತ್ತಾಗುತ್ತದೆ ಎಂದರು.
ಮೈಸೂರಿನ ಕೆ.ಆರ್. ನಗರ ತಾಲೂಕಿನ ಬಯಲು ಮಂದಿರದಲ್ಲಿ ಜಿಲ್ಲಾ ಬಿಜೆಪಿ ಸಮಾವೇಶದಲ್ಲಿ ಮಾತನಾಡುತ್ತಿದ್ದ ಯಡಿಯೂರಪ್ಪ, ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ವಾಕ್ಪ್ರಹಾರ ನಡೆಸಿದರು.
ತಾನು ಏಳು ಬಾರಿ ಹಣಕಾಸು ಸಚಿವನಾಗಿದ್ದವನು ಎಂದು ಬಡಾಯಿ ಕೊಚ್ಚಿಕೊಳ್ಳುವ ಸಿದ್ದರಾಮಯ್ಯಗೆ, ನಮ್ಮ ಸರಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಯಾಕೆ ತರಲಾಗಲಿಲ್ಲ? ಈಗ ನಾವು ರಾಜೀನಾಮೆ ಕೊಡಬೇಕೆಂದು ಕೇಳುತ್ತಿದ್ದೀರಾ? ನಿಮಗೆ ಆ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು.
ಜನತೆ ನಮಗೆ ಅಧಿಕಾರ ಕೊಟ್ಟರೂ ಕೆಲಸ ಮಾಡಲು ಬಿಡುತ್ತಿಲ್ಲ. ನಿಮ್ಮನ್ನು ಅಧಿಕಾರಕ್ಕೆ ತಂದಾಗ ನೀವು ಕೆಲಸವನ್ನೇ ಮಾಡಿಲ್ಲ. ಈಗ ಟೀಕೆ ಮಾಡುತ್ತೀರಾ? ನೀವು ಹಣಕಾಸು ಸಚಿವರಾಗಿದ್ದಾಗ ಯಾಕೆ ರೈತರಿಗೆ ಶೇ.3ರ ಬಡ್ಡಿ ದರದಲ್ಲಿ ಸಾಲ ಕೊಡಲಿಲ್ಲ ಎಂದು ಜನತೆಗೆ ಮನದಟ್ಟು ಮಾಡಿ ಎಂದು ಮುಖ್ಯಮಂತ್ರಿ ಸವಾಲು ಹಾಕಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯಡಿಯೂರಪ್ಪನವರ ಹಗರಣಗಳ ತನಿಖೆ ನಡೆಸಿ ಅವರನ್ನು ಜೈಲಿಗೆ ಕಳುಹಿಸುತ್ತೇವೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಯಡಿಯೂರಪ್ಪ, ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ಬಳಿಕ ಯಾರು ಜೈಲಿಗೆ ಹೋಗುತ್ತಾರೆ ಎನ್ನುವುದು ಗೊತ್ತಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬದ ವಿರುದ್ಧವೂ ಮುಖ್ಯಮಂತ್ರಿ ವಾಗ್ದಾಳಿ ನಡೆಸಿದರು.
ವಚನ ಭ್ರಷ್ಟ ಹಾಗೂ ನಂಬಿಕೆ ದ್ರೋಹ ಮಾಡಿದ ಫಲವನ್ನು ಗೌಡ ಮತ್ತು ಕುಮಾರಸ್ವಾಮಿ ಉಣ್ಣುತ್ತಿದ್ದಾರೆ. ಕಾಂಗ್ರೆಸ್ಸನ್ನು ಮುಗಿಸಲು ನನಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದ ಗೌಡರು, ಈಗ ಅದನ್ನೆಲ್ಲ ಮರೆತು ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ಸನ್ನು ಮುಗಿಸಬೇಕೆನ್ನುವುದು ನನ್ನ ಬಯಕೆ. ಅದಕ್ಕಾಗಿ ಬಿಜೆಪಿ ಸಂಸದರು ಸಹಾಯ ಮಾಡಬೇಕು ಎಂದು ನನ್ನಲ್ಲಿ ದೆಹಲಿಯಲ್ಲಿ ಕೇಳಿಕೊಂಡಿದ್ದರು. ಆದರೆ ನಂತರದಲ್ಲಿ ನಮಗೆ ಅವರ ಮಗ ಕುಮಾರಸ್ವಾಮಿಯೇ ದ್ರೋಹ ಮಾಡಿದರು. ಈಗ ನಮಗೆ ಪಾಠ ಮಾಡಲು ಬರುತ್ತಿದ್ದಾರೆ ಎಂದು ಛೇಡಿಸಿದರು.