ಪಕ್ಷ ಗೆಲ್ಲಿಸಲು ಸಾಧ್ಯವಾಗದಿದ್ರೆ ವಿಷ ಕೊಡಿ: ಕುಮಾರಸ್ವಾಮಿ
ಮದ್ದೂರು, ಗುರುವಾರ, 9 ಡಿಸೆಂಬರ್ 2010( 11:46 IST )
ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ಮಾಡಿಕೊಂಡಿರುವ ಜೆಡಿಎಸ್, ಚುನಾವಣೆಯಲ್ಲಿ ಪಕ್ಷಕ್ಕೆ ಬಹುಮತ ತರಲು ಸಾಧ್ಯವಾಗದಿದ್ದರೆ ನನಗೆ ವಿಷ ಕೊಡಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಬಹಿರಂಗವಾಗಿ ಅಲವತ್ತುಕೊಂಡಿದ್ದಾರೆ.
ಪಟ್ಟಣದ ಶಿವಪುರದ ವಿವಾಹ ಸಮಾರಂಭವೊಂದರಲ್ಲಿ ಭಾಗವಹಿಸಿದ ನಂತರ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಕುರಿತು ಮಾತುಕತೆ ನಡೆಸಿದ ವೇಳೆ ಈ ರೀತಿಯಾಗಿ ತಿಳಿಸಿದ್ದಾರೆ.
ಪಕ್ಷದ ಮುಖಂಡರು ಯಾವುದೇ ಅಸಮಾಧಾನವಿಲ್ಲದೆ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಮೂಲಕ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಅಭ್ಯರ್ಥಿ ಆಯ್ಕೆಯಲ್ಲಿ ಎಡವಿದರೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಸಲಹೆ ನೀಡಿದ್ದಾರೆ.
ಒಂದ ವೇಳೆ ಜಿಲ್ಲೆಯಲ್ಲಿ ಪಕ್ಷಕ್ಕೆ ಬಹುಮತ ತರಲು ಸಾಧ್ಯವಾಗದಿದ್ದರೆ ನನಗೆ ವಿಷ ನೀಡಿ ಎಂದು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಉದ್ವೇಗದ ಮಾತುಗಳನ್ನು ಹೇಳಿದ್ದಾರೆ. ಜಿ.ಪಂ. ಹಾಗೂ ತಾ.ಪಂ. ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಕರ್ತರು ದುಡಿಯಬೇಕು ಎಂದು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.
ಈ ಹಿಂದೆಯೂ ಎಚ್‌ಡಿಕೆ ಇದೇ ಮಾತು ಹೇಳಿದ್ರು: ಕಳೆದ ಬಾರಿ ರಾಜ್ಯದಲ್ಲಿ ಐದು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದ ಸಂದರ್ಭದಲ್ಲಿ, ರಾಮನಗರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸುವುದಾದರೆ ನನಗೆ ವಿಷ ಕೊಡಿ ಎಂದು ಕುಮಾರಸ್ವಾಮಿ ಕಾರ್ಯಕರ್ತರ ಸಭೆಯಲ್ಲಿ ತಿಳಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.