ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿ ಎಷ್ಟಾಗಿದೆ? ವ್ಯಕ್ತಿಗತವಾಗಿ ಎಷ್ಟು ಅಭಿವೃದ್ಧಿಯಾಗಿದೆ ಎಂಬುದನ್ನು ಚುನಾವಣೆ ಸಂದರ್ಭದಲ್ಲಿ ಬಹಿರಂಗಪಡಿಸುವುದಾಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.
ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ಸರಕಾರದ ವಿರುದ್ಧ ಭ್ರಷ್ಟಾಚಾರದ ಅಸ್ತ್ರವೊಂದೇ ಅಲ್ಲ. ಈ ಸರಕಾರವನ್ನು ಬೆತ್ತಲೆಗೊಳಿಸುವಂತಹ, ಜನಾಭಿಪ್ರಾಯ ಮೂಡಿಸುವಂತಹ ಹಲವಾರು ಅಸ್ತ್ರಗಳು ನಮ್ಮ ಬತ್ತಳಿಕೆಯಲ್ಲಿವೆ. ಅಖಾಡ ರಂಗೇರಲಿ, ಒಂದೊಂದಾಗಿ ಪ್ರಯೋಗ ಮಾಡುವುದಾಗಿ ತಿಳಿಸಿದ್ದಾರೆ.
ಹೊಂದಾಣಿಕೆ ಮಾಡಿಕೊಂಡರೆ ಬಿಜೆಪಿಗೆ ಲಾಭ ಆಗಲಿದೆ ಎಂಬ ಮಾತು ಕೇಳಿಬರುತ್ತಿದೆ. ಆ ಹಿನ್ನೆಲೆಯಲ್ಲಿ ನಮ್ಮ ಮುಂದೆ ಹೊಂದಾಣಿಕೆ ಪ್ರಶ್ನೆಯೇ ಇಲ್ಲ. ಅದರ ಬಗ್ಗೆ ನಾವು ಗಂಭೀರವಾಗಿ ತಲೆ ಕೆಡಿಸಿಕೊಂಡಿಲ್ಲ. ಅಲ್ಲದೇ ಜೆಡಿಎಸ್ ಎಲ್ಲಾ ಜಿಲ್ಲೆಗಳಲ್ಲೂ ಸ್ಪರ್ಧೆ ಮಾಡಲು ನಿರ್ಧರಿಸಿದೆ ಎಂದು ಹೇಳಿದರು.
ಲೋಕಾಯುಕ್ತ ನ್ಯಾಯಮೂರ್ತಿ ಹೆಗ್ಡೆ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರು ಮಾಡಿರುವ ಟೀಕೆ ಅವರಿಗೆ ಶೋಭೆ ತರುವಂಥದ್ದಲ್ಲ. ಬಿಜೆಪಿಯ ಪರಮೋಚ್ಛ ನಾಯಕ, ಗಡ್ಕರಿ ಅವರೆಲ್ಲ ಹೆಗ್ಡೆ ರಾಜೀನಾಮೆ ವಾಪಸ್ ಪಡೆಯಬೇಕೆಂದು ಗೋಗರೆದಿದ್ದು ಯಾಕೆ ಎಂದು ಗೌಡರು ಪ್ರಶ್ನಿಸಿದ್ದಾರೆ.
ಈ ಚುನಾವಣಾ ಫಲಿತಾಂಶ ಜನಾದೇಶ ಆಗುವುದಿಲ್ಲ. ನಾಳೆ 2 ಜಿ ಸ್ಪೆಕ್ಟ್ರಂ ಹಗರಣದಲ್ಲಿ ಭಾಗಿಯಾಗಿರುವ ಎ.ರಾಜಾ ಚುನಾವಣೆಯಲ್ಲಿ ಗೆದ್ದು ಬಂದರೆ ಅವರು ಯಾವುದೇ ಪಾಪ ಮಾಡಿಲ್ಲ ಎಂದು ಬಿಜೆಪಿ ಭಾವಿಸಿಕೊಳ್ಳುತ್ತದೆಯೇ ಎಂದು ತಿರುಗೇಟು ನೀಡಿದ್ದಾರೆ.