ಭೂ ಹಗರಣ ತನಿಖೆ ಮತ್ತು ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗುರುವಾರ ಸಾವಿರಾರು ರೈತರು ಮತ್ತು ವಿವಿಧ ಸಂಘಟನೆಗಳು ವಿಧಾನಸೌಧದ ಮುಂದೆ ಭಾರೀ ಪ್ರತಿಭಟನೆ ನಡೆಸಿದವು.
ಕೆಐಎಡಿಬಿ, ಬಿಡಿಎ, ಅಕ್ರಮ ಗಣಿಗಾರಿಕೆ ಸೇರಿದಂತೆ ಹಲವಾರು ಭ್ರಷ್ಟಾಚಾರಗಳಲ್ಲಿ ಸರಕಾರ ಭಾಗಿಯಾಗಿದೆ ಎಂದು ಆರೋಪಿಸಿರುವ ರಾಜ್ಯ ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಸಮತಾ ಸೈನಿಕ ದಳ,ದಲಿತ ಸಂಘರ್ಷ ಸಮಿತಿ, ಕರುನಾಡ ಸೇನೆ. ಮಾನವ ಹಕ್ಕುಗಳ ಹೋರಾಟ ವೇದಿಕೆ, ಎಡಪಕ್ಷಗಳು ಸೇರಿ ಬೆಂಗಳೂರು ಮಹಾನಗರ ಹಾಗೂ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿದವು.
ನಗರದಲ್ಲಿ ಹಲವಾರು ಜನಪರ ಸಂಘಟನೆಗಳು ಬಿಬಿಎಂಪಿ ಕಚೇರಿ ಎದುರಿಗಿರುವ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ವಿಧಾನಸೌಧದವರೆಗೆ ಸಾವಿರಾರು ರೈತರು, ಸಂಘಟನೆ ಕಾರ್ಯಕರ್ತರು ಒಗ್ಗೂಡಿ ಸರಕಾರ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಘೋಷಣೆ ಕೂಗಿ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿದರು.
ಅಭಿವೃದ್ಧಿ ಉದ್ದೇಶಕ್ಕೆ ಅಥವಾ ಕೈಗಾರಿಕೆಗಳ ಸ್ಥಾಪನೆ ಉದ್ದೇಶಕ್ಕೆ ಭೂಮಿ ಬೇಕಿದ್ದರೆ ಸರಕಾರ ಕೆಐಎಡಿಬಿ ಸಂಸ್ಥೆಯ ಮೂಲಕ ಭೂಮಿಯನ್ನು ವಶಪಡಿಸಿಕೊಳ್ಳುವುದನ್ನು ಬಿಟ್ಟು ರೈತರನ್ನೇ ನೇರವಾಗಿ ಕೇಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ನಂತರ ಪ್ರತಿಭಟನಾಕಾರರು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.