ರೈತನಿಗೆ ಹಕ್ಕು ಪತ್ರ ಕೊಟ್ಟಿದ್ರೆ ಸಿಎಂ ಕಾಲಿಗೆ ಬೀಳ್ತೇನೆ: ಕಾಗೋಡು
ಶಿವಮೊಗ್ಗ, ಶುಕ್ರವಾರ, 10 ಡಿಸೆಂಬರ್ 2010( 15:19 IST )
ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶಿಕಾರಿಪುರದಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ ಒಂದೇ ಒಂದು ಹಕ್ಕು ಪತ್ರವನ್ನು ಇದುವರೆಗೆ ನೀಡಿದ್ದರೆ ಅವರ ಕಾಲಿಗೆ ಬೀಳುತ್ತೇನೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸವಾಲು ಹಾಕಿದ್ದಾರೆ.
ಅವರು ನಗರದ ಅಂಬೇಡ್ಕರ್ ಭವನದಲ್ಲಿ ನಗರ ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ನೂತನ ಅಧ್ಯಕ್ಷ ರುದ್ರೇಶ್ ಅವರಿಗೆ ಅಭಿನಂದನೆ ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಯಡಿಯೂರಪ್ಪ ಮತ್ತು ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
ತಾನು ರೈತ, ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದೇನೆ ಎಂದು ಡಂಗುರ ಸಾರುವ ಮುಖ್ಯಮಂತ್ರಿ ಶಿಕಾರಿಪುರ ತಾಲೂಕಿನಲ್ಲಿನ ರೈತರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕು ಪತ್ರ ಕೊಟ್ಟೆ ಇಲ್ಲ ಎಂದರು.
ಅಲ್ಲದೇ ಬಿ.ಎಚ್.ರಸ್ತೆಯಲ್ಲಿ ನಿರ್ಮಿಸುತ್ತಿರುವ ಸ್ಟಾರ್ ಹೋಟೆಲ್‌ಗೆ ಇವರು ಲೈಸೆನ್ಸ್ ಪಡೆದಿಲ್ಲ. ಇದನ್ನು ಮೊದಲು ಒಡೆದು ಹಾಕಬೇಕು. ಜವಳಿ ಕಾರ್ಖಾನೆ ಸ್ಥಾಪನೆಗೆ 240 ಎಕರೆ ಭೂಮಿ ಬೇಕಾ? ಹತ್ತು ಎಕರೆ ಸಾಕು ಎಂದ ಅವರು, ಜಿಲ್ಲೆಯಲ್ಲಿ ಆರಂಭವಾಗುವ ಎಲ್ಲಾ ಕಂಪನಿಗಳಲ್ಲೂ ಇವರ ಪಾಲು ಇದೆ ಎಂದು ಆರೋಪಿಸಿದರು.
ಮಗನಿಗೆ ಬೆಂಗಳೂರಿನಲ್ಲಿ ಸೈಟು ಇರೋದು ಮುಖ್ಯಮಂತ್ರಿಗೆ ಗೊತ್ತಿರಲಿಲ್ಲಾ, ಆದ್ರೂ ಮಂಜೂರು ಮಾಡಿದ್ರು. ಈಗ ವಾಪಸು ಕೊಟ್ರೆ ಅಪರಾಧ ಒಪ್ಪಿಕೊಂಡಿದ್ದಾರೆ ಅಂತಾನೇ ಅರ್ಥ. ಹಾಗಾಗಿ ತಪ್ಪು ಒಪ್ಪಿಕೊಂಡು ರಾಜೀನಾಮೆ ಕೊಟ್ಟು ಹೊರಗೆ ಬರಬೇಕು ಎಂದು ಒತ್ತಾಯಿಸಿದರು.