ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಭ್ರಷ್ಟರನ್ನು ಸನ್ಮಾನಿಸಬೇಡಿ, ಬಹಿಷ್ಕರಿಸಿ: ನ್ಯಾ.ಸಂತೋಷ್ ಹೆಗ್ಡೆ (Lokayuktha | Santhosh hegde | BJP | Congress | Yeddyurappa)
ಭ್ರಷ್ಟರನ್ನು ಸನ್ಮಾನಿಸುವ ಬದಲು ಅವರನ್ನು ಬಹಿಷ್ಕರಿಸಿದಾಗ ಮಾತ್ರ ಸಮಾಜದಲ್ಲಿ ಭ್ರಷ್ಟಾಚಾರ ನಿಯಂತ್ರಿಸಲು ಸಾಧ್ಯ ಎಂದು ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.
ನಮ್ಮಲ್ಲಿ ಭ್ರಷ್ಟರನ್ನು ಶಿಕ್ಷಿಸುವ ಬದಲು ಸನ್ಮಾನ ಮಾಡಿ ಅವರನ್ನು ಆದರ್ಶರೆಂದು ಕಾಣುತ್ತೇವೆ. ಮೊದಲು ಇಂತಹ ಭ್ರಷ್ಟರನ್ನು ಸಮಾಜದಿಂದ ಬಹಿಷ್ಕರಿಸಿದರೆ ಮಾತ್ರ ಸ್ವಲ್ಪ ಮಟ್ಟಿಗಾದರೂ ಭ್ರಷ್ಟಚಾರ ಹತೋಟಿಗೆ ತರಲು ಸಾಧ್ಯ ಎಂದ ಅವರು, ಯಾವುದೇ ಸಂಸ್ಥೆಗಳು ಕೂಡ ಭ್ರಷ್ಟಾಚಾರದಿಂದ ಹೊರತಾಗಿಲ್ಲ ಎಂದರು.
ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಕಾಂಗಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದನ್ನು ರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲರು, ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಒಪ್ಪಿಕೊಂಡಿದ್ದಾರೆ. ಇವರೇ ಒಪ್ಪಿಕೊಂಡಿರುವಾಗಿ ಭ್ರಷ್ಟಾಚಾರವನ್ನು ನಿಯಂತ್ರಿಸಲು ಏನು ಕ್ರಮ ಕೈಗೊಂಡಿದ್ದೀರಿ ಎಂದು ನಾನೇಕೆ ಪ್ರಶ್ನಿಸಬಾರದು ಎಂದು ಶುಕ್ರವಾರ ಬೆಂಗಳೂರು ವರದಿಗಾರರ ಕೂಟ ಮತ್ತು ಪ್ರೆಸ್ ಕ್ಲಬ್ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು.
ಭ್ರಷ್ಟಾಚಾರಕ್ಕೆ ಇಂದಿನ ಸಮಾಜ ಕೂಡ ಕಾರಣ ಎಂದ ಅವರು, ಒಬ್ಬ ವ್ಯಕ್ತಿ ಭ್ರಷ್ಟಾಚಾರದಲ್ಲಿ ತೊಡಗಿದ್ದರೆ, ಎಲ್ಲವನ್ನೂ ಮೌನವಹಿಸಿ ಸಹಿಸಿಕೊಂಡಿರುವುದರಿಂದಲೇ ಭ್ರಷ್ಟಾಚಾರ ಹೆಚ್ಚಾಗಲು ಕಾರಣ ಎಂದರು. ಅತಿಬೇಗ ಶ್ರೀಮಂತನಾಗಬೇಕೆಂಬ ಕಾರಣದಿಂದ ವಾಮಮಾರ್ಗದ ಮೂಲಕ ಹೋದರೆ ಭ್ರಷ್ಟಾಚಾರಿಗಳಾಗುತ್ತೇವೆ. ಕಾನೂನಿನ ಚೌಕಟ್ಟಿನಲ್ಲಿಯೇ ಕೆಲಸ ಮಾಡಿ ಅಲ್ಪ ತೃಪ್ತಿ ಹೊಂದಿದರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ಹೇಳಿದರು.