ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಹೌದು, ನಾನು ವಿರೋಧ ಪಕ್ಷದ ನಾಯಕ: ಸಂತೋಷ್ ಹೆಗ್ಡೆ (Lokayukta | N Santosh Hegde | BJP | Karnataka)
Bookmark and Share Feedback Print
 
ಹೌದು, ನಾನು ವಿರೋಧ ಪಕ್ಷದ ನಾಯಕ. ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿಯವರು ಹೇಳಿರುವುದು ಸರಿಯಾಗಿಯೇ ಇದೆ. ಆದರೆ ನಾನು ಕೇವಲ ಬಿಜೆಪಿ ಸರಕಾರಕ್ಕಷ್ಟೇ ವಿರೋಧ ಪಕ್ಷದ ನಾಯಕನಲ್ಲ. ಯಾವ ಪಕ್ಷ ಅಧಿಕಾರದಲ್ಲಿದ್ದರೂ ನನ್ನ ಸ್ಥಾನ ಇದೇ ಆಗಿರುತ್ತದೆ. ಆಳುವವರ ಅಕ್ರಮ, ಲೋಪಗಳನ್ನು ಎತ್ತಿ ತೋರಿಸುವುದೇ ನಮ್ಮ ಸಂಸ್ಥೆಯ ಕೆಲಸ -- ಹೀಗೆಂದು ಹೇಳಿರುವುದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗಡೆ.
NRB

ವರದಿಗಾರರ ಕೂಟ, ಪ್ರೆಸ್‌ಕ್ಲಬ್ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ತನ್ನ ಮೇಲೆ ಇತ್ತೀಚೆಗೆ ಬಂದಿರುವ ಆರೋಪಗಳ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದರು.

ಬಿಜೆಪಿ ಸರಕಾರದ ಪಾಲಿಗೆ ವಿರೋಧ ಪಕ್ಷದ ನಾಯಕನಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಗಡ್ಕರಿ ಟೀಕಿಸಿರುವುದು ಸರಿಯಾಗಿಯೇ ಇದೆ. ಇದೊಂದು ಸಹಜ ಆರೋಪ. ಆದರೆ, ನಾನು ಬಿಜೆಪಿ ಸರಕಾರದ ಪಾಲಿಗೆ ಮಾತ್ರ ವಿಪಕ್ಷದ ನಾಯಕನಲ್ಲ. ನಾನು ಯಾವುದೇ ಒಂದು ಪಕ್ಷದ ನಾಯಕನಲ್ಲ. ಯಾವ ಪಕ್ಷ ಅಧಿಕಾರದಲ್ಲಿದ್ದರೂ ಲೋಕಾಯುಕ್ತ ಸಂಸ್ಥೆಯ ಆಶಯ, ಉದ್ದೇಶಗಳಿಗೆ ಅನುಗುಣವಾಗಿ ಕೆಲಸ ಮಾಡಬೇಕಾಗುತ್ತದೆ. ನನ್ನ ಕರ್ತವ್ಯ ನಿರ್ವಹಣೆ ಅಧಿಕಾರದಲ್ಲಿರುವವರ ಪಾಲಿಗೆ ಖಾರವಾಗಿಯೇ ಇರುತ್ತದೆ ಎಂದರು.

ರಾಜಕೀಯ ಸೇರಲ್ಲ...
ಲೋಕಾಯುಕ್ತ ಹುದ್ದೆ ಇನ್ನು ಕೆಲವೇ ತಿಂಗಳುಗಳಲ್ಲಿ ಮುಗಿಯುತ್ತದೆ. ಆದರೆ ಆ ಬಳಿಕ ಖಂಡಿತಾ ರಾಜಕೀಯಕ್ಕೆ ಬರುವುದಿಲ್ಲ. ನನಗೆ ರಾಜಕೀಯವೆಂದರೆ ಆಸಕ್ತಿಯಿರದ ಕ್ಷೇತ್ರ. ಹಾಗೊಂದು ವೇಳೆ ನಾನು ಚುನಾವಣೆಗೆ ನಿಂತರೆ ಜನ ಓಟಿನ ಬದಲು ಏಟು ಕೊಡಲಿ ಎಂದರು.

ನಿವೃತ್ತಿಯ ನಂತರ ನಿಮ್ಮನ್ನು ರಾಜ್ಯಪಾಲರಾಗಿ ನೇಮಕ ಮಾಡುವ ಮಾತುಗಳು ಕೇಳಿ ಬರುತ್ತಿವೆಯಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ, ಎಲ್ಲಾ ಊಹಾಪೋಹ. ಅವಕಾಶ ಬಂದಾಗ ಅದರ ಬಗ್ಗೆ ಯೋಚಿಸೋಣ. ಖಂಡಿತಾ ರಾಜಕೀಯಕ್ಕೆ ಬರಲಾರೆ ಎಂದು ತನ್ನ ನಿಲುವನ್ನು ಸ್ಪಷ್ಟಪಡಿಸಿದರು.

ನಾನು ಸಿಎಂ ಎದುರಾಳಿಯಲ್ಲ...
ನಾನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ಆದರೆ ಅದು ಸುಳ್ಳು. ಆ ಕುರಿತು ನಿಮಗೆ ದಾಖಲೆಗಳನ್ನೇ ನೀಡುತ್ತೇನೆ ಎಂದಿರುವ ಲೋಕಾಯುಕ್ತ, ಸಿಎಂ ವಿರುದ್ಧ ಬಂದಿರುವ ದೂರುಗಳನ್ನೇ ಉದಾಹರಿಸಿದರು.

ಮುಖ್ಯಮಂತ್ರಿ ವಿರುದ್ಧ ನನಗೆ 14 ದೂರುಗಳು ಬಂದಿವೆ. ಅವುಗಳಲ್ಲಿ ಎಂಟು ದೂರುಗಳಲ್ಲಿ ಸತ್ವವಿಲ್ಲ ಎಂಬ ಕಾರಣಕ್ಕೆ ಪರಿಗಣಿಸಲಾಗಿಲ್ಲ. ಉಳಿದ ಆರು ಪ್ರಕರಣಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದ್ದು, ಒಂದು ದೂರಿನ ಆಧಾರದ ಮೇಲೆ ಮುಖ್ಯಮಂತ್ರಿಗೆ ನೋಟೀಸ್ ನೀಡಲಾಗಿದೆ. ಸಿಎಂ ವಿರೋಧಿ ನಾನಾಗಿದ್ದರೆ ಎಲ್ಲಾ ದೂರುಗಳನ್ನು ಪರಿಗಣಿಸುತ್ತಿದ್ದೆ ಎಂದರು.

ರಾಜ್ಯದಲ್ಲೂ ಪಾಖಂಡಿ ಪತ್ರಕರ್ತರು..
ಭ್ರಷ್ಟಾಚಾರದಲ್ಲಿ ರಾಜ್ಯದ ಪತ್ರಕರ್ತರೂ ಹಿಂದೆ ಬಿದ್ದಿಲ್ಲ. ಲಾಬಿಗಾರ್ತಿ ನೀರಾ ರಾಡಿಯಾ ಜತೆ ಕೆಲವು ಪತ್ರಕರ್ತರು ಪ್ರಭಾವ ಬೀರಲು ಯತ್ನಿಸಿದ ರೀತಿಯಲ್ಲೇ, ರಾಜ್ಯದಲ್ಲೂ ಪ್ರಕರಣಗಳು ಕಂಡು ಬಂದಿವೆ. ಕೆಲವು ಪತ್ರಕರ್ತರು ಅಕ್ರಮಗಳಲ್ಲಿ ಭಾಗಿಯಾದ ದೂರುಗಳು ಬಂದಿವೆ ಎಂದು ಲೋಕಾಯುಕ್ತರು ತಿಳಿಸಿದ್ದಾರೆ.

ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ 20 ಪತ್ರಕರ್ತರ ಮೇಲೆ ನನಗೆ ದೂರು ಬಂದಿತ್ತು. ಆದರೆ ಅದು ಲೋಕಾಯುಕ್ತದ ಪರಿಧಿಯಿಂದ ಹೊರಗಿರುವುದರಿಂದ ನಾವು ತನಿಖೆಗೆ ಮುಂದಾಗಿಲ್ಲ ಎಂದರು.

ಭೂ ಹಗರಣದ ಕುರಿತು ಮಾತಿಗಿಳಿದರೆ ಹರಿಶ್ಚಂದ್ರನಂತಾಡುವ ರಾಜ್ಯದ ಕೆಲವು ಪತ್ರಕರ್ತರು, ತಾವೇ ಸ್ವತಃ ಸರಕಾರಿ ಸೈಟುಗಳನ್ನು ಪಡೆದುಕೊಂಡವರು ಎಂದು ಇತ್ತೀಚೆಗಷ್ಟೇ ಟೆಹಲ್ಕಾ ಪತ್ರಿಕೆ ತನ್ನ ವರದಿಯಲ್ಲಿ ಬಹಿರಂಗಪಡಿಸಿದ್ದನ್ನು ಇದೀಗ ಸ್ಮರಿಸಬಹುದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ