ಸಿದ್ದರಾಮಯ್ಯ, ಧರಂಸಿಂಗ್ ಹಾಗೂ ಯಡಿಯೂರಪ್ಪ ಅವರಿಗೆ ಕೈ ಕೊಟ್ಟ ಜಾತ್ಯತೀತ ಜನತಾದಳದ ದೇವೇಗೌಡರು ಮತ್ತು ಪುತ್ರ ಕುಮಾರಸ್ವಾಮಿ ಮೀರ್‌ಸಾಧಿಕರೇ ಹೊರತು ನಾನಲ್ಲ ಎಂದು ಕಾಂಗ್ರೆಸ್ ಮುಖಂಡ, ಸಂಸದ ಎಚ್.ವಿಶ್ವನಾಥ್ ತಿರುಗೇಟು ನೀಡಿದ್ದಾರೆ.
ಕೆ.ಆರ್.ನಗರದ ಮೀರ್‌ಸಾಧಿಕರಿಂದ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಪದವಿ ಸಿಗದೆ ಅನ್ಯಾಯ ಆಯಿತೆಂದು ಮೈಸೂರಿನ ಜಾತ್ಯತೀತ ದಳದ ಅಧಿವೇಶನದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ಹೆಸರು ಹೇಳದೆ ತಮ್ಮ ವಿರುದ್ಧ ಮಾಡಿರುವ ಆರೋಪಕ್ಕೆ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.
ಸಿದ್ದರಾಮಯ್ಯ ಅವರನ್ನು ನಿಮ್ಮ ತಂದೆ ನಿಮ್ಮ ಪಕ್ಷದಿಂದ ಉಚ್ಛಾಟಿಸಿ, ಉಪ ಮುಖ್ಯಮಂತ್ರಿ ಹುದ್ದೆಯನ್ನು ಕಸಿದುಕೊಂಡು ಅವಮಾನ ಮಾಡಿದಾಗ ಇದೇ ಕೆ.ಆರ್.ನಗರದವರು ತುಂಬು ಹೃದಯದಿಂದ ಅವರನ್ನು ಸ್ವಾಗತಿಸಿದ್ದು ಕಾಂಗ್ರೆಸ್ ಪಕ್ಷ ಎಂದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವುದನ್ನು ಕಾಂಗ್ರೆಸ್ಸಿಗರು ತಪ್ಪಿಸಿದ್ದು ಈಗಲೂ ಜಾತ್ಯತೀತ ದಳಕ್ಕೆ ಬಂದರೆ ಅವರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂಬುದಾಗಿ ಕುಮಾರಸ್ವಾಮಿ ಆಹ್ವಾನ ನೀಡಿದ್ದಾರೆ.
ಇಪ್ಪತ್ತೈದು ವರ್ಷಗಳ ಕಾಲ ಜನತಾ ಪಕ್ಷ ಕಟ್ಟಿ ಬೆಳೆಸಲು ಸಿದ್ದರಾಮಯ್ಯ ಅವರನ್ನು ಉಪಯೋಗಿಸಿಕೊಂಡು ಹುಬ್ಬಳ್ಳಿ ಅಹಿಂದ ಸಮಾವೇಶದಲ್ಲಿ ಅವರು ಭಾಗವಹಿಸಿದ್ದೇ ಅಪರಾಧವೆಂದು ಪರಿಗಣಿಸಿ ಉಚ್ಛಾಟಿಸಿ ರಾಜಕೀಯ ಕ್ರೌರ್ಯ ಮೆರೆದದ್ದು ದೇವೇಗೌಡರ ಕುಟುಂಬವೇ ಹೊರತು ಕಾಂಗ್ರೆಸ್ಸಿಗರಲ್ಲ ಎಂದು ವಾಗ್ದಾಳಿ ನಡೆಸಿದರು.