ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಅಕ್ರಮ ಭೂಮಿಗೆ ಸಂಬಂಧಿಸಿದಂತೆ ದಾಖಲೆ ದೊರೆತಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದರೆ, ಮತ್ತೊಂದೆಡೆ ಗೌಡರ ಕುಟುಂಬದ ಅಕ್ರಮ ಆಸ್ತಿ ವಶಪಡಿಸಿಕೊಂಡು ದಲಿತರಿಗೆ ದಾನ ಮಾಡುತ್ತೇವೆ ಎಂದು ಹೇಳಿ ಹಾಸನಕ್ಕೆ ಹೋದವರು ಅಲ್ಲಿಂದ ಏನು ತೆಗೆದುಕೊಂಡು ಬಂದರು ಅಂತ ಅವರನ್ನೇ ಕೇಳಿ ಎಂದು ದೇವೇಗೌಡರು ತಿರುಗೇಟು ನೀಡಿದ್ದಾರೆ.
ಹಾಸನ ಜಿಲ್ಲೆಯ ಹೊಳೇನರಸಿಪುರ ಮತ್ತು ಅರಕಲಗೂಡು ತಾಲೂಕುಗಳಲ್ಲಿ ದೇವೇಗೌಡ ಮತ್ತು ಕುಟುಂಬದ ಸದಸ್ಯರು 82.1ಎಕರೆ ಅಕ್ರಮ ಆಸ್ತಿ ಹೊಂದಿದ್ದಾರೆ ಎಂಬ ಬಗ್ಗೆ ಇತ್ತೀಚೆಗೆ ಅಧಿಕಾರಿಗಳು ಹಾಸನ ಜಿಲ್ಲೆಯಲ್ಲಿ ದಾಖಲೆಗಳನ್ನು ಪರಿಶೀಲಿಸಿ ವಾಪಸ್ ಬಂದಿರುವ ಬಗ್ಗೆ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಮಾಡಿರುವ ಆರೋಪದ ಬಗ್ಗೆ ಈ ಹಿಂದೆಯೇ ಲೋಕಾಯುಕ್ತ, ಸಿಓಡಿ ತನಿಖೆ ನಡೆದು ಅಕ್ರಮ ಆಸ್ತಿ ಗಳಿಕೆ ಸುಳ್ಳು ಎಂದು ಸಾಬೀತಾಗಿದೆ. ಹೈಕೋರ್ಟ್‌ನಲ್ಲಿ ಎಂಟು ಅರ್ಜಿಗಳು ಸಲ್ಲಿಕೆಯಾಗಿದ್ದು, ಎಲ್ಲವೂ ತಮ್ಮ ಪರವಾಗಿಯೇ ಇತ್ಯರ್ಥಗೊಂಡಿವೆ ಎಂದು ಸಮಜಾಯಿಷಿ ನೀಡಿದರು.
ತಮ್ಮ ಕುಟುಂಬ ಆಕ್ರಮ ಆಸ್ತಿ ಮಾಡಿದೆ ಎಂಬ ಆರೋಪದ ಬಗ್ಗೆ ಹೆಚ್ಚು ಮಾತನಾಡಲ್ಲ, ಬೇರೆ ಸಂದರ್ಭದಲ್ಲಿ ಸಂಪೂರ್ಣವಾಗಿ ವಿವರ ಹೇಳುತ್ತೇನೆ. ಆದರೆ ದೇವೇಗೌಡನ ಕೊನೆಯ ಹಂತದಲ್ಲೂ ಮುಗಿಸಲು ಯಾವ ರೀತಿ ಪ್ರಯತ್ನ ನಡೆಯುತ್ತಿದೆ ಎಂಬುದನ್ನು ಜನರಿಗೆ ತಿಳಿಸುತ್ತೇನೆ ಎಂದರು.