ಉಸ್ತುವಾರಿ ಕಿತ್ತುಕೊಂಡ್ರೆ ರಾಜಕೀಯಕ್ಕೆ ಗುಡ್‌ಬೈ: ಸೋಮಣ್ಣ
ಹಾಸನ, ಭಾನುವಾರ, 12 ಡಿಸೆಂಬರ್ 2010( 09:36 IST )
NRB
ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆ ಮುಗಿದ ನಂತರ ಜಿಲ್ಲಾ ಉಸ್ತುವಾರಿಯನ್ನು ಬದಲಾಯಿಸಿದ್ರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸಚಿವ ವಿ.ಸೋಮಣ್ಣ ಧಮಕಿ ಹಾಕಿದ್ದಾರೆ.
ನಗರಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರ ಜತೆ ಮಾತನಾಡಿ, ಸರಕಾರ ಇರುವವರೆಗೂ ನಾನೇ ಹಾಸನ ಜಿಲ್ಲಾ ಉಸ್ತುವಾರಿ ನೋಡಿಕೊಳ್ಳುತ್ತೇನೆ. ಒಂದು ವೇಳೆ ಮತ್ತೆ ಬದಲಾವಣೆ ಮಾಡಿದ್ದೇ ಆದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಬೆದರಿಕೆ ಹಾಕಿದರು.
ಹಾಸನ ಜಿಲ್ಲೆಯಲ್ಲಿ ಕೆಲವಡೆ ಜೆಡಿಎಸ್ ಪ್ರಭಾವವಿದೆ. ಇಲ್ಲಿ ಜೆಡಿಎಸ್ ತೊಲಗಿಸಿ ಬಿಜೆಪಿಯನ್ನು ಗೆಲ್ಲಿಸುವುದೇ ನನ್ನ ಗುರಿಯಾಗಿದೆ. ಅದನ್ನು ಮಾಡಿ ತೋರಿಸುತ್ತೇನೆ ಎಂದು ಹೇಳಿದರು.
ಸೋಮಣ್ಣ ಖಾತೆ ದಿಢೀರ್ ಬದಲು: ರಾಜ್ಯ ಸರಕಾರ ಶುಕ್ರವಾರ ರಾತ್ರಿ ದಿಢೀರ್ ಆಗಿ ಕೆಲವು ಖಾತೆ ಮರುಹಂಚಿಕೆ ಮಾಡಿದ್ದು, ಅದರಂತೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ವಿ.ಸೋಮಣ್ಣ ಅವರ ಖಾತೆಯನ್ನು ಬದಲಿಸಿ ಅವರಿಗೆ ವಸತಿ ಖಾತೆ ನೀಡಲಾಗಿದೆ. ಇಂಧನ ಸಚಿವ ಶೋಭಾ ಕರಂದ್ಲಾಜೆ ಅವರಿಗೆ ಆಹಾರ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
ಸಚಿವ ವಿ.ಎಸ್.ಆಚಾರ್ಯ ಅವರಿಗೆ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರಿಂದ ತೆರವಾದ ಐಟಿ-ಬಿಟಿ ಖಾತೆಯನ್ನು ಹೆಚ್ಚುವರಿ ನೀಡಲಾಗಿದೆ. ಕಾನೂನು ಸಚಿವ ಸುರೇಶ್ ಕುಮಾರ್ ಅವರಿಗೆ ಜಲಮಂಡಳಿ ಖಾತೆಯನ್ನು ಹೆಚ್ಚುವರಿಯಾಗಿ ನೀಡಿದೆ.
ಸೋಮಣ್ಣಗೆ ಆಯೋಗದಿಂದ ನೋಟಿಸ್ ಜಾರಿ: ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಘೋಷಣೆಯಾದ ನಂತರ ಸಾರ್ವಜನಿಕ ಸಭೆಯಲ್ಲಿ ಆಮಿಷವೊಡ್ಡುವ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ವಿ.ಸೋಮಣ್ಣ ಅವರಿಗೆ ರಾಜ್ಯ ಚುನಾವಣಾ ಆಯೋಗ ವಿವರಣೆ ಕೇಳಿ ನೋಟಿಸ್ ಜಾರಿ ಮಾಡಿದೆ.