ಭ್ರಷ್ಟಾಚಾರ, ಅವ್ಯವಹಾರದ ಮೂಲಕ ಲೂಟಿ ಹೊಡೆದು ಹಣ ಗಳಿಸುವುದೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರಕಾರದ ಸಾಧನೆಯಾಗಿದೆ ಎಂದು ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಶನಿವಾರ ಇಲ್ಲಿನ ಆಳಂದದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯು ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಅಂಗವಾಗಿ ಏರ್ಪಡಿಸಿದ್ದ ಪೂರ್ವ ಸಿದ್ದತಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದ.
ಮುಖ್ಯಮಂತ್ರಿ ಯಡಿಯೂರಪ್ಪ ಹಿಂದಿನ ಮುಖ್ಯಮಂತ್ರಿಗಳಾದ ಜತ್ತಿ, ವೀರೇಂದ್ರ ಪಾಟೀಲ್ ಮುಂತಾದವರಿಗೆ ತನ್ನನ್ನು ಹೋಲಿಸಿಕೊಳ್ಳುತ್ತಾರೆ. ಅವರ ಸಾಧನೆಗಳೇನು? ಇವರ ಸಾಧನೆಗಳೇನು ಎಂದು ಪ್ರಶ್ನಿಸಿದ ಖರ್ಗೆ, ಅವರ ಸಾಧನೆಗಳನ್ನು ಯಡಿಯೂರಪ್ಪ ಜೀವಮಾನದಲ್ಲಿ ಮಾಡಲು ಸಾಧ್ಯವಿಲ್ಲ ಎಂದರು.
ಆಡಳಿತಾರೂಢ ಪಕ್ಷದಲ್ಲಿಯೇ ಹಲವು ಸಚಿವರು ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದರೂ ಕೂಡ ಅವರೆಲ್ಲ ಸಾಚಾಗಳೆಂಬಂತೆ ಬಿಂಬಿಸಲಾಗುತ್ತಿದೆ. ಸ್ವತಃ ಮುಖ್ಯಮಂತ್ರಿಗಳೇ ಭ್ರಷ್ಟಾಚಾರದಲ್ಲಿ ಸಿಲುಕಿದ್ದರೂ ಕೂಡ ಬಿಜೆಪಿ ಹೈಕಮಾಂಡ್ ವರಿಷ್ಠರೇ ಶಹಬ್ಬಾಸ್ ಗಿರಿ ಕೊಡುತ್ತಾರೆಂದ ಮೇಲೆ ಆ ಪಕ್ಷದ ತತ್ವ, ಸಿದ್ದಾಂತಗಳೇನು ಎಂಬುದು ತಿಳಿಯುತ್ತದೆ ಎಂದು ವ್ಯಂಗ್ಯವಾಡಿದರು.