ಬಿಜೆಪಿಗೆ ಗುಡ್‌ಬೈ; ಚನ್ನಿಗಪ್ಪ ಮತ್ತೆ ಜೆಡಿಎಸ್ ಪಾಳಯಕ್ಕೆ
ಬೆಂಗಳೂರು, ಭಾನುವಾರ, 12 ಡಿಸೆಂಬರ್ 2010( 12:21 IST )
NRB
ಆಡಳಿತಾರೂಢ ಬಿಜೆಪಿ ಪಕ್ಷ ತನ್ನನ್ನು ಕಡೆಗಣಿಸಿರುವುದು ಹಾಗೂ ಶಾಸಕ ಸುರೇಶ್ ಗೌಡ ದಬ್ಬಾಳಿಕೆಯಿಂದ ಬೇಸತ್ತು ಬಿಜೆಪಿ ತೊರೆದು ಮತ್ತೆ ಜೆಡಿಎಸ್ ಸೇರ್ಪಡೆಗೊಳ್ಳುವುದಾಗಿ ಮಾಜಿ ಸಚಿವ ಚನ್ನಿಗಪ್ಪ ಭಾನುವಾರ ತಿಳಿಸಿದ್ದಾರೆ.
ನೆಲಮಂಗಲದ ಭೈರನಾಯಕನಹಳ್ಳಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಶಾಸಕ ಸುರೇಶ್ ಗೌಡರ ದಬ್ಬಾಳಿಕೆಯಿಂದ ಬೇಸತ್ತು ಡಿಸೆಂಬರ್ 15ರಂದು ನೂರಾರು ಬೆಂಬಲಿಗರ ಜೊತೆ ಜೆಡಿಎಸ್ ಪಕ್ಷ ಸೇರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಆದರೆ ತಮ್ಮ ಪುತ್ರ ಗೌರಿ ಶಂಕರ್ ಜೆಡಿಎಸ್ ಸೇರ್ಪಡೆ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಅದು ಮಗನಿಗೆ ಬಿಟ್ಟ ವಿಚಾರ ಎಂದು ಹೇಳಿರುವ ಚನ್ನಿಗಪ್ಪ, ಜೆಡಿಎಸ್ ನನ್ನ ಮನೆ ಇದ್ದಂತೆ. ದೇವೇಗೌಡರ ಆಶೀರ್ವಾದದೊಂದಿಗೆ ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿದ್ದಾರೆ.
ಜೆಡಿಎಸ್ ಸೇರ್ಪಡೆ ಕುರಿತಂತೆ ಈಗಾಗಲೇ ಪಕ್ಷದ ವರಿಷ್ಠರಾದ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಜತೆ ಚರ್ಚೆ ನಡೆಸಿದ್ದು, ಅವರು ಗ್ರೀನ್ ಸಿಗ್ನಲ್ ನೀಡಿರುವುದಾಗಿ ತಿಳಿಸಿದ್ದಾರೆ.
ತುಮಕೂರು ಕ್ಷೇತ್ರದ ಪ್ರಭಾವಿ ನಾಯಕರಾಗಿದ್ದ ಚನ್ನಿಗಪ್ಪ ಅವರು ಎರಡು ವರ್ಷಗಳ ಹಿಂದಷ್ಟೇ, ದೇವೇಗೌಡರು ಯಾರ ಏಳಿಗೆಯನ್ನೂ ಬಯಸಿದವರಲ್ಲ. ಪಕ್ಷದ ನಾಯಕರು ಏನೂ ಮಾಡಿದರೂ ತಪ್ಪು ಎಂಬ ಭಾವನೆ ಅವರದ್ದು. ಹಾಗಾಗಿ ಜೆಡಿಎಸ್‌ನಲ್ಲಿ ಭವಿಷ್ಯವಿಲ್ಲ ಎಂದು ಮನಗಂಡು ಬಿಜೆಪಿ ಸೇರುವುದಾಗಿ ಹೇಳಿದ್ದರು. ನಂತರ ಬಿಜೆಪಿ ಸೇರ್ಪಡೆಗೊಂಡಿದ್ದ ಚನ್ನಿಗಪ್ಪ ಇದೀಗ ಅಲ್ಲಿಯೂ ಅಸಮಾಧಾನಗೊಂಡಿದ್ದು, ಮತ್ತೆ ಜೆಡಿಎಸ್ ಸೇರುವ ನಿರ್ಧಾರ ಕೈಗೊಂಡಿದ್ದಾರೆ.