ಸೋಮವಾರ ನಡೆಯಲಿರುವ ಹಿಂದೂ ಸಮಾಜೋತ್ಸವ ಹಿನ್ನೆಲೆಯಲ್ಲಿ ಭಾನುವಾರ ಬೈಕ್ ರಾಲಿ ನಡೆಯುತ್ತಿದ್ದ ವೇಳೆ ಕಿಡಿಗೇಡಿಗಳು ಕೆಲವು ಅಂಗಡಿ-ಮುಂಗಟ್ಟುಗಳ ಮೇಲೆ ಕಲ್ಲು ತೂರಾಟ ನಡೆಸಿದ ಪರಿಣಾಮ ಉದ್ವಿಗ್ನಗೊಂಡ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ನಿಷೇಧಾಜ್ಞೆ ಹೇರಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ಪವಾರ್ ತಿಳಿಸಿದ್ದಾರೆ.
ನಾಳೆ ನಗರದಲ್ಲಿ ಬೃಹತ್ ಹಿಂದೂ ಸಮಾವೇಶ ಆಯೋಜಿಸಿದ್ದು, ಇಂದು ಬೈಕ್ ರಾಲಿ ನಡೆಸುತ್ತಿರುವ ವೇಳೆ ಕೆಲವು ಕಿಡಿಗೇಡಿಗಳು ಮತ್ತೊಂದು ಕೋಮಿನ ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಸ್ವಲ್ಪ ಕಾಲ ಉದ್ವಿಗ್ನ ಪರಿಸ್ಥಿತಿ ತಲೆದೋರಿತ್ತು. ಕೂಡಲೇ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದರು. ನಂತರ ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ಪ್ರವೀಣ್ ಪವಾರ್ ನಿಷೇಧಾಜ್ಞೆ ಜಾರಿಗೆ ಆದೇಶ ನೀಡಿದ್ದಾರೆ.
ತಾಲೂಕಿನಾದ್ಯಂತ ಕೋಮು ಪ್ರಚೋದಕ ಬ್ಯಾನರ್, ಪೋಸ್ಟರ್ ಅಳವಡಿಸಿದ್ದು, ಕಳೆದ ಮೂರು-ನಾಲ್ಕು ದಿನಗಳಿಂದ ಕುಂದಾಪುರದಲ್ಲಿ ಉದ್ವಿಗ್ನ ಸ್ಥಿತಿ ಇದ್ದಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಆದರೆ ಇಂದು ಬೈಕ್ ರಾಲಿ ನಡೆದ ಸಂದರ್ಭದಲ್ಲಿಯೂ ಪೊಲೀಸ್ ಭದ್ರತೆ ಇಲ್ಲದ ಕಾರಣ ಗೊಂದಲ ಉಂಟಾಗಿರುವುದಾಗಿ ದೂರಿದ್ದಾರೆ. ಘಟನೆ ನಂತರ ಕುಂದಾಪುರ ಹಾಗೂ ಗಂಗೊಳ್ಳಿಯ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.