ರಾಜ್ಯ ರಾಜ್ಯಕಾರಣದಲ್ಲೀಗ ಪಕ್ಷಾಂತರ ಪರ್ವ ಆರಂಭಗೊಂಡಿದ್ದು, ಇದೀಗ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ನಾಲ್ಕನೇ ಬಾರಿಯೂ ಕೈ ಪಾಳಯಕ್ಕೆ ಗುಡ್ ಬೈ ಹೇಳಿ ಜೆಡಿಎಸ್ ಪಕ್ಷಕ್ಕೆ ಸೇರಲು ಸಜ್ಜಾಗಿದ್ದಾರೆ. ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಸಂದರ್ಭದಲ್ಲಿ ಬಂಗಾರಪ್ಪ ಈ ನಿರ್ಧಾರಕ್ಕೆ ಮುಂದಾಗಿರುವುದು ಕಾಂಗ್ರೆಸ್ ಪಾಳಯದಲ್ಲಿ ಆತಂಕದ ಅಲೆ ಎಬ್ಬಿಸಿದೆ.
ಪಕ್ಷಾಂತರ ಮಾಡುವಲ್ಲಿ ಹೆಸರಾಗಿರುವ ಬಂಗಾರಪ್ಪ ಅವರು ಕಾಂಗ್ರೆಸ್ ಪಕ್ಷಕ್ಕೆ ಕೈಕೊಟ್ಟು ಇನ್ನೆರಡು ದಿನಗಳಲ್ಲಿ ಜೆಡಿಎಸ್ ಸೇರುವುದು ಬಹುತೇಕ ಖಚಿತವಾಗಿದೆ. ಭಾನುವಾರ ಬಂಗಾರಪ್ಪ ಅವರ ಸ್ವಗೃಹಕ್ಕೆ ತೆರಳಿದ ಜೆಡಿಎಸ್ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅಧಿಕೃತ ಆಹ್ವಾನವನ್ನೂ ನೀಡಿ, ಅದಕ್ಕೆ ಸಕಾರಾತ್ಮಕ ಸ್ಪಂದನೆ ತೋರುವ ಭರವಸೆಯನ್ನು ಪಡೆದುಕೊಂಡಿದ್ದಾರೆ.
ಆಹ್ವಾನ ಸ್ವೀಕರಿಸಿದ ಬಂಗಾರಪ್ಪ ಈ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಜತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು. ಮೂಲಗಳ ಪ್ರಕಾರ ಒಂದೆರಡು ದಿನಗಳಲ್ಲಿ ಬಂಗಾರಪ್ಪ ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ ಬಿಜೆಪಿ ವಿರುದ್ಧದ ಹೋರಾಟಕ್ಕೆ ಬಂಗಾರಪ್ಪ ಅವರ ಆಶೀರ್ವಾದ ಬೇಡಿದ್ದೇವೆ. ಅವರು ಬೆಂಬಲ ನೀಡಿದರೆ, ನನ್ನ ಹೋರಾಟಕ್ಕೆ ಆನೆ ಬಲ ಬರುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರು ಬಿಜೆಪಿ ಜೊತೆ ಶಾಮೀಲಾಗಿದ್ದಾರೆ. ಬಿಜೆಪಿ ವಿರುದ್ಧ ಜಾತ್ಯತೀತ ಶಕ್ತಿಗಳನ್ನು ಒಗ್ಗೂಡಿಸಬೇಕೆಂಬ ಆಶಯಕ್ಕೆ ತದ್ವಿರುದ್ದವಾಗಿ ನಡೆಯುತ್ತಿದ್ದಾರೆ. ಕುಮಾರಸ್ವಾಮಿ ಅವರು ನೀಡಿರುವ ಆಹ್ವಾನದ ಕುರಿತು ಮೂರು, ನಾಲ್ಕು ದಿನಗಳಲ್ಲಿ ನಿರ್ಧಾರಕ್ಕೆ ಬರುತ್ತೇನೆ ಎಂದು ಬಂಗಾರಪ್ಪ ಪ್ರತಿಕ್ರಿಯಿಸಿದ್ದಾರೆ.
ಕುಮಾರಸ್ವಾಮಿ ಅವರು ಧೈರ್ಯದಿಂದ ಬಿಜೆಪಿ ಸರಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಅವರ ಹೋರಾಟವನ್ನು ಶ್ಲಾಘಿಸಲೇಬೇಕು. ಜಾತ್ಯತೀತ ಮತಗಳ ವಿಭಜನೆ ತಡೆಯುವ ದೃಷ್ಟಿಯಿಂದ ಪಂಚಾಯ್ತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಬೇಕಿತ್ತು. ಸಣ್ಣ ಪಕ್ಷವೆಂದು ಕಡೆಗಣಿಸುವುದು ಸರಿಯಲ್ಲ ಎಂದು ಕಾಂಗ್ರೆಸ್ ಮುಖಂಡರ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.